Saturday, January 3, 2009

ಕಾಡೊಂದು ಪಟ್ಟಣ - ರಾಸ್


ಭಾಗ - 8

ಇದು ಅಮೆರಿಕದ ಇನ್ನೊಂದು ಮಗ್ಗಲು




ಈ ಪಟ್ಟಣವನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಫೋರ್ಬ್ಸ್ ಪತ್ರಿಕೆ ಸಮೀಕ್ಷೆಯ ಪ್ರಕಾರ, ಇದು ಅಮೆರಿಕದ ಒಂಬತ್ತನೇ ಅತ್ಯಂತ ದುಬಾರಿ ವಾಸ ಪ್ರದೇಶ. ಅಮೆರಿಕದ ರಿಯಲ್ ಎಸ್ಟೇಟ್ ಭಾಷೆಯಲ್ಲೇ ಹೇಳುವುದಾದರೆ 9th Costliest Residential Zip Code!

ನಿಜ ಹೇಳಿ. ಅಮೆರಿಕದ ಪಟ್ಟಣ ಎಂದರೆ, ನಿಮ್ಮ ಕಲ್ಪನೆ ಹೇಗಿರುತ್ತದೆ? ಶೇ.೮೦ರಷ್ಟು ಭಾರತೀಯರ ಪ್ರಕಾರ ಅಮೆರಿಕ ಎಂದರೆ... ಹಾಲಿವುಡ್ ಸಿನೆಮಾಗಳಲ್ಲಿ ಕಾಣುವ ಎತ್ತರೆತ್ತರದ ಕಟ್ಟಡ, ನೆಲ-ಗಗನ ಕಾಣದಷ್ಟು ಗಗನ ಚುಂಬಿಗಳ ದಟ್ಟ ಕಾಂಕ್ರೀಟ್ ಕಾಡು, ಬ್ಯೂಸಿಯಾಗಿ ಓಡಾಡುವ ಜನ ಜಂಗುಳಿ, ಕಾರ್ ಕಾರ್ ಕಾರ್...

ಕ್ಷಮಿಸಿ. ನ್ಯೂಯಾರ್ಕ್ ಸಿಟಿ ಅಥವಾ ಷಿಕಾಗೋ ಶಹರದಂಥ ಅಮೆರಿಕದ ಕೆಲ ನಗರಗಳು ಮಾತ್ರ ಹಾಗಿವೆ. ಉದಾಹರಣೆಗೆ, ಅಮೆರಿಕದ ರಾಜಧಾನಿ ವಾಷಿಂಗ್‌ಟನ್ ಡಿ.ಸಿ.ಯೇ ಹಾಗಿಲ್ಲ. ೫೫೫ ಅಡಿ ಎತ್ತರದ ‘ವಾಷಿಂಗ್‌ಟನ್ ಸ್ಮಾರಕ’ ಸ್ತಂಭ ಈ ನಗರದ ಅತಿ ಎತ್ತರದ ಕಟ್ಟಡ. ಕಾನೂನಿನ ಪ್ರಕಾರ ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಈ ಸ್ಮಾರಕಕ್ಕಿಂತ ಎತ್ತರದ ಕಟ್ಟಡವನ್ನು ನಿರ್‍ಮಿಸುವಂತಿಲ್ಲ. ಹಾಗಾಗಿ, ವಿಶ್ವದ ಹಿರಿಯಣ್ಣನ ರಾಜಧಾನಿಯಲ್ಲಿ ಗಗನಚುಂಬಿ ಕಟ್ಟಡಗಳೇ ಇಲ್ಲ! ಜಗತ್ಪ್ರಸಿದ್ಧ ಲಾಸ್‌ವೇಗಾಸ್ ಇನ್ನೊಂದು ಉದಾಹರಣೆ. ಪ್ರತಿ ೩ ನಿಮಿಷಕ್ಕೆ ಇಲ್ಲಿಗೆ ಒಂದು ವಿಮಾನದ ತುಂಬಾ ಜನರು ಬರುತ್ತಾರೆ. ಮತ್ತೆ ಮೂರು ನಿಮಿಷಕ್ಕೆ ಒಂದು ವಿಮಾನದಷ್ಟು ಜನರು ಹಾರಿ ಹೋಗುತ್ತಾರೆ. ಆದರೆ, ಇದೊಂದು ಬರೀ ಮರುಭೂಮಿಯಂಥ ಊರು! ಕೇವಲ ಒಂದು ರಸ್ತೆ ಮಾತ್ರ ಇಲ್ಲಿನ ಹೈಲೈಟ್. ಝಗಮಗಿಸುವ ನಿಯಾನ್ ದೀಪಗಳ, ಅಂದಕ್ಕಿಂತ ಅಂದದ ವಿನ್ಯಾಸದ, ಹಲಮಹಡಿ ಕಟ್ಟಡಗಳ ಜೂಜು ಅಡ್ಡೆಗಳು, ವಯಸ್ಕರ ಮನರಂಜನಾ ಕೇಂದ್ರಗಳು ಹಾಗೂ ಹೊಟೆಲ್‌ಗಳೇ ಇರುವ ರಸ್ತೆ ಇದು. ಇದನ್ನು ಬಿಟ್ಟರೆ ಇಡೀ ಊರು ಮಾಮೂಲಿ.

ಇನ್ನು ‘ರಾಸ್’ ಎಂಬೋ ಪಟ್ಟಣವಂತೂ ‘ಅಮೆರಿಕದ ಕಲ್ಪನಾ ನಗರಿಗೆ’ ತದ್ವಿರುದ್ಧ ಪ್ರಪಂಚ.

ಕಳೆದ ಅಕ್ಟೋಬರ್‌ನಲ್ಲಿ, ‘ರಾಸ್ ಟೌನ್’ಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತ್ತು. ಸ್ಯಾನ್ ಫ್ರಾನ್ಸಿಸ್ಕೋದ ಮರೈನ್ ಕೌಂಟಿಯ ಒಂದು ಪಟ್ಟಣ ಇದು. ಗೋಲ್ಡನ್ ಗೇಟ್ ಬ್ರಿಜ್‌ನಿಂದ ೨೦ ನಿಮಿಷದ ಡ್ರೈವ್. ಸಮುದ್ರದ ಹಾದಿಯಲ್ಲಿ ಬಂದರೆ, ಸ್ಯಾನ್‌ಪ್ರಾನ್ಸಿಸ್ಕೋ ಪಿಯರ್-೧ ಬಂದರಿನಿಂದ ಮುಕ್ಕಾಲು ಗಂಟೆ ಅದ್ಭುತ ಜಲಯಾತ್ರೆ! ಗಾಡ್ ಫಾದರ್, ಜಾಕ್, ವಾಟ್ ಡ್ರೀಮ್ಸ್ ಮೇ ಕಮ್ ಮುಂತಾದ ಸುಪ್ರಸಿದ್ಧ ಚಿತ್ರಗಳು ಈ ಊರಿನಲ್ಲೇ ಚಿತ್ರೀಕರಣವಾಗಿದೆ.

ವಿಶೇಷವೆಂದರೆ, ಈ ಪಟ್ಟಣದ ತುಂಬಾ ದಟ್ಟ ಕಾಡು! ಎತ್ತರೆತ್ತರದ ಶತಾಯುಷಿ ರೆಡ್‌ವುಡ್ ಮರಗಳ ಕಾನನ. ಪಟ್ಟಣ ಎಂದರೆ ನಂಬಲು ಸಾಧ್ಯವೇ ಇಲ್ಲ. ಹಳ್ಳಿ ಎಂದಿದ್ದರೂ ಪರವಾಗಿರಲಿಲ್ಲ. ಆದರೆ, ನಿಜಕ್ಕೂ ಇದೊಂದು ಪಟ್ಟಣ. ಗುಂಡಿಗಳಿಲ್ಲದ ಟಾರ್ ರಸ್ತೆಗಳು, ಎಲ್ಲೆಡೆ ಟ್ರಾಫಿಕ್ ಸಿಗ್ನಲ್ ಬೋರ್‍ಡುಗಳು, ಸಿಗ್ನಲ್ ಲೈಟುಗಳು, ಒಂದು ಬಿಸಿನೆಸ್ ಬೀದಿ, ಅಲ್ಲಿ ಹತ್ತೋ ಹನ್ನೆರಡೋ ಅಂಗಡಿಗಳು, ಟೌನ್ ಅಂದರೆ ಅಷ್ಟೇ.

ಮಿಕ್ಕಂತೆ ಒಂದು ಟೌನ್ ಹಾಲ್, ಟೌನ್ ಮುನಿಸಿಪಾಲಿಟಿ, ಅಗ್ನಿಶಾಮಕ ಕೇಂದ್ರ, ಪೊಲೀಸ್ ಠಾಣೆ, ಒಂದು ದೊಡ್ಡ ಪೋಸ್ಟಾಫಿಸು, ಒಂದು ಗಾಲ್ಫ್ ಕ್ಲಬ್, ಎರಡು ಶಾಲೆಗಳು, ಗ್ರಂಥಾಲಯ, ಹಿಸ್ಟರಿ ಸೊಸೈಟಿ, ಸುಮಾರು ೮೦೦ ಮನೆಗಳು ಮತ್ತು ೨೫೦೦ ಜನರು.

ಹಾಗಂತ ಈ ಪಟ್ಟಣವನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಫೋರ್‍ಬ್ಸ್ ಪತ್ರಿಕೆ ಸಮೀಕ್ಷೆಯ ಪ್ರಕಾರ, ಇದು ಅಮೆರಿಕದ ಒಂಬತ್ತನೇ ಅತ್ಯಂತ ದುಬಾರಿ ವಾಸ ಪ್ರದೇಶ. ಅಮೆರಿಕದ ರಿಯಲ್ ಎಸ್ಟೇಟ್ ಭಾಷೆಯಲ್ಲೇ ಹೇಳುವುದಾದರೆ 9th Costliest Residential Zip Code!

ಕರಡಿ ಲಾಂಛನ:

ಅಮೆರಿಕ ಸರ್‍ಕಾರಿ ವ್ಯವಸ್ಥೆಯ ಒಂದು ವೈಶಿಷ್ಟ್ಯ ಬಹಳ ಜನರಿಗೆ ಗೊತ್ತಿಲ್ಲ. ಅಮೆರಿಕದಲ್ಲೂ ಭಾರತದಂತೆ ಬಹು ಹಂತದ ಸರ್‍ಕಾರವಿದೆ. ಕೇಂದ್ರ ಸರ್‍ಕಾರ, ರಾಜ್ಯ ಸರ್‍ಕಾರ, ಜಿಲ್ಲಾ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಇದ್ದಂತೆ, ಅಲ್ಲಿ
ಫೆಡರಲ್, ಸ್ಟೇಟ್, ಕೌಂಟಿ, ಟೌನ್, ವಿಲೇಜ್ ಸರ್‍ಕಾರಗಳಿವೆ. ಅಮೆರಿಕ ದೇಶಕ್ಕೆ ಒಂದು ಧ್ವಜ ಮತ್ತು ಲಾಂಛನ ಇರುವಂತೆ ಅಲ್ಲಿ ಪ್ರತಿ ರಾಜ್ಯ, ಜಿಲ್ಲೆ, ಪಟ್ಟಣ, ಗ್ರಾಮಕ್ಕೂ ಒಂದೊಂದು ಧ್ವಜ ಮತ್ತು ಲಾಂಛನ ಇದೆ. ಆದ್ದರಿಂದ, ಅಮೆರಿಕ ಸರ್‍ಕಾರದ ಕಾರ್‍ಯಕ್ರಮಗಳಲ್ಲಿ ಬೇರೆ ಬೇರೆ ರೀತಿಯ ಅನೇಕ ಧ್ವಜಗಳನ್ನು ಕಾಣಬಹುದು. ಪ್ರತಿ ಹಂತದ ಸರ್‍ಕಾರವೂ ತನಗಿಂತ ಉನ್ನತ ಹಂತದ ಸರ್‍ಕಾರಕ್ಕೆ ಅಧೀನವಾಗಿದ್ದರೂ ಸ್ವತಂತ್ರ ‘ದೇಶದಂತೆ’ ಕಾರ್‍ಯನಿರ್‍ವಹಿಸುತ್ತದೆ. ಪ್ರತಿ ಹಂತದ ಸರ್‍ಕಾರವೂ ತನ್ನ ಉನ್ನತ ಹಂತದ ಸರ್‍ಕಾರದ ಕಾನೂನುಗಳನ್ನಲ್ಲದೇ ತನ್ನದೇ ಸಂವಿಧಾನವನ್ನೂ, ಕಾನೂನನ್ನೂ, ತೆರಿಗೆ ವ್ಯವಸ್ಥೆಯನ್ನೂ, ನ್ಯಾಯಾಂಗ ವ್ಯವಸ್ಥೆಯನ್ನೂ ಹೊಂದಿರುತ್ತದೆ.

ಈ ಹಿನ್ನೆಲೆಯಲ್ಲಿ ರಾಸ್ ಪಟ್ಟಣಕ್ಕೂ ತನ್ನದೆ ಆದ ಕಾನೂನು, ನೀತಿ ನಿಯಮಾವಳಿ, ಧ್ವಜ, ಲಾಂಛನ ಇದೆ. ಈ ಪಟ್ಟಣದ ಲಾಂಛನ ಕರಡಿ.

ಅಲ್ಲೊಂದು ಪಟ್ಟಣ ಪಂಚಾಯ್ತಿ

ಕಳೆದ ವರ್‍ಷವಷ್ಟೇ ಶತಮಾನೋತ್ಸವ ಆಚರಿಸಿರುವ ಈ ಪಟ್ಟಣದ ಆಡಳಿತ ನೋಡಿಕೊಳ್ಳಲು ಟೌನ್ ಕೌನ್ಸಿಲ್ ಇದೆ. ಇದು ನಮ್ಮ ಪಟ್ಟಣ ಪಂಚಾಯ್ತಿ ಇದ್ದಹಾಗೆ. ಆದರೆ, ನೋ ಪಾಲಿಟಿಕ್ಸ್!

ಈ ಪಂಚಾಯ್ತಿ ತನ್ನ ಊರನ್ನು ಹೇಗೆ ಅಭಿವೃದ್ಧಿ ಮಾಡುತ್ತದೆ, ಹೇಗೆ ರಕ್ಷಿಸಿಕೊಳ್ಳುತ್ತದೆ -ಎನ್ನುವುದಕ್ಕೆ ಕೆಲವು ಉದಾಹರಣೆ ನೋಡಿ.

ಊರೆಂದರೆ, ಮನೆ ಕಟ್ಟುವುದು, ಬೀಳಿಸುವುದು, ನವೀಕರಿಸುವುದು ಇದ್ದದ್ದೇ. ಕಟ್ಟಡ ಕಾಮಗಾರಿ ಎಂದರೆ, ಮಣ್ಣು, ಸಿಮೆಂಟು, ಜಲ್ಲಿ ಕಲ್ಲು ಸಾಗಣೆ, ಯಂತ್ರಗಳ ಕರ್‍ಕಶ ಹೊಗೆ, ಶಬ್ದ, ಧೂಳು, ಕಾಮಗಾರಿಯ ಸುತ್ತಲ ಪ್ರದೇಶ ಹಾಗೂ ರಸ್ತೆ ತುಂಬ ಗಲೀಜು... ಇವೆಲ್ಲಾ ನಮ್ಮೂರಿನಲ್ಲಿ ಸಾಮಾನ್ಯ ತಾನೇ? ಆದರೆ, ಈ ಪಟ್ಟಣದ ಪಂಚಾಯ್ತಿ ಇದಕ್ಕೆಲ್ಲಾ ಕಠಿಣ ಕಾನೂನು ರೂಪಿಸಿದೆ. ಮನೆ ಕಟ್ಟಲು ಕಾಲಾವಕಾಶವನ್ನು ನಿಗದಿಪಡಿಸುತ್ತದೆ. ನಮ್ಮೂರಿನಂತೆ ಹಲವಾರು ವರ್‍ಷ ಮನೆ ಕಟ್ಟುತ್ತಲೇ ಇರುವಂತಿಲ್ಲ. ನಿಗದಿತ ಅವಧಿಯೊಳಗೆ ಮನೆ ಕಟ್ಟಿ ಮುಗಿಸದಿದ್ದರೆ ಯದ್ವಾತದ್ವಾ ದಂಡ ವಿಧಿಸುತ್ತದೆ. ಬೇಕಾದರೆ ನಿರ್‍ಮಾಣ ಪರವಾನಗಿಯನ್ನೂ ರದ್ದು ಪಡಿಸುತ್ತದೆ. ಕಟ್ಟುವವರು ಊರು ಗಲೀಜು ಮಾಡಿದರೂ ವಿಪರೀತ ದಂಡ.

ಮನೆ ಕಟ್ಟುವವರು ಇಲ್ಲಿನ ಕಾಡಿನ ಅಂದಕ್ಕೆ ಸರಿಯಾದ ವಿನ್ಯಾಸದ ಮನೆಯನ್ನು ಮಾತ್ರ ಕಟ್ಟಬಹುದು. ಮನೆಗಳಿಗೆ ಯಾವ ಯಾವ ಬಣ್ಣ ಬಳಸಬಹುದು ಎಂಬುದನ್ನು ನಿರ್‍ಧರಿಸಲು ಈ ಪಟ್ಟಣ ಪಂಚಾಯ್ತಿ ಊರಿನಲ್ಲಿ ಚುನಾವಣೆ ನಡೆಸಿ ಜನಾಭಿಪ್ರಾಯ ಪಡೆಯುತ್ತದೆ.

ಇಲ್ಲಿ ಅತ್ಯಾಧುನಿಕ ಹಾಗೂ ದೊಡ್ಡ ಅಂಚೆ ಕಚೇರಿಯಿದೆ. ಆದರೆ, ಮನೆ ಮನೆಗೆ ಅಂಚೆಯನ್ನು ತಲುಪಿಸುವ ವ್ಯವಸ್ಥೆ ಮಾತ್ರ ಇಲ್ಲ! ಇದೇಕೆ ಹೀಗೆ?

ಒಮ್ಮೆ ಇಲ್ಲಿ ಚುನಾವಣೆ ನಡೆಯಿತು. ಅಂಚೆಯನ್ನು ಮನೆ ಮನೆಗೆ ತಲುಪಿಸಬೇಕೋ? ಅಥವಾ ಜನರೇ ಅಂಚೆ ಕಚೇರಿಗೆ ಬಂದು ತಮ್ಮ ತಮ್ಮ ಅಂಚೆಯನ್ನು ಪಡೆದುಕೊಂಡು ಹೋಗಬೇಕೋ ಎಂದು ನಿರ್‍ಧರಿಸುವ ಮತದಾನ ಇದಾಗಿತ್ತು. ಅಂಚೆಯನ್ನು ಮನೆ ಮನೆಗೆ ವಿತರಿಸುವುದು ಬೇಡ ಎಂಬ ಅಭಿಪ್ರಾಯಕ್ಕೇ ಬಹುಮತ ಲಭಿಸಿತ್ತು. ಹಾಗಾಗಿ, ರಾಸ್ ಪಟ್ಟಣದಲ್ಲಿ ಈಗಲೂ ಅಂಚೆ ವಿತರಣೆ ಇಲ್ಲ. ಇಂತಹ ವಿಚಿತ್ರ ನಿರ್‍ಧಾರ ಕೈಗೊಂಡ ಜಗತ್ತಿನ ಏಕೈಕ ಪಟ್ಟಣ ಇದಿರಬಹುದು!

ವಿದ್ಯಾಭ್ಯಾಸ ದುಬಾರಿ

ಕಾಡಿನಂಥ ಊರು ಎಂದ ಮಾತ್ರಕ್ಕೆ ಇಲ್ಲಿ ವಿಧ್ಯಾಭ್ಯಾಸ ಕಳಪೆ ಎಂದುಕೊಳ್ಳಬೇಡಿ. ಇಲ್ಲಿ ಶಿಕ್ಷಣ ಅತ್ಯುತ್ತಮ ವಾಗಿರಲೆಂದು ಹೆಚ್ಚು ಸಂಬಳ ನೀಡಿ ಉತ್ತಮ ಶಿಕ್ಷಕರನ್ನು ಇಲ್ಲಿನ ಆಡಳಿತ ನೇಮಿಸಿಕೊಂಡಿದೆ. ಅದಕ್ಕಾಗಿ ಜನರು ದುಬಾರಿ ಶಿಕ್ಷಣ ತೆರಿಗೆಯನ್ನು ಪಟ್ಟಣ ಪಂಚಾಯ್ತಿಗೆ ನೀಡುತ್ತಾರೆ. ಶಾಲಾ ಶುಲ್ಕವೂ ದುಬಾರಿ. ಪರಿಣಾಮವಾಗಿ ಇದು ಸಣ್ಣ ಪಟ್ಟಣವಾದರೂ ಇಲ್ಲಿನ ಶಿಕ್ಷಣ
ಸ್ಯಾನ್‌ಫ್ರಾನ್ಸಿಸ್ಕೋದ ಅನೇಕ ಶಾಲೆಗಳಿಗಿಂತ ದುಬಾರಿ.

ಇಲ್ಲಿನ ಪಟ್ಟಣ ಪಂಚಾಯ್ತಿಯಲ್ಲಿ ಕೈಗೊಳ್ಳುವ ಎಲ್ಲ ನಿರ್‍ಣಯಗಳನ್ನೂ ಪ್ರತಿ ಮನೆ ಮನೆಗೂ ತಲುಪಿಸಲಾಗುತ್ತದೆ. ಜನರು ಯಾವುದೇ ವಿವರಗಳನ್ನೂ ಕೇಳಬಹುದು. ಅಷ್ಟೊಂದು ಪಾರದರ್‍ಶಕ ಆಡಳಿತ ಇಲ್ಲಿದೆ. ಇಲ್ಲಿ ಆಡಳಿತ ನಡೆಸುವ ಯಾರೂ ರಾಜಕಾರಣಿಗಳಲ್ಲ. ಪಕ್ಷವಂತೂ ಯಾರಿಗೂ ಇಲ್ಲ.

ನಮ್ಮ ಪಂಚಾಯ್ತಿಗಳು ಹಾಗಲ್ಲ. ಪಂಚಾಯ್ತಿ ಮಟ್ಟದಲ್ಲಿ ಚುನಾವಣೆ ಪಕ್ಷಾತೀತ ಎಂಬುದು ಕಾದದ ಮೇಲೆ ಮಾತ್ರ ಇದೆ. ವಾಸ್ತವವಾಗಿ ಪ್ರತಿ ಪಂಚಾಯ್ತಿಯೂ ರಾಜಕೀಯ ಪಕ್ಷಗಳಿಂದ ಗಬ್ಬೆದ್ದುಹೋಗಿವೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದರೂ ನಮ್ಮ ರಾಜಕಾರಣಿಗಳು ಇನ್ನೂ ಗ್ರಾಮ ಪಂಚಾಯ್ತಿ ಚುನಾವಣೆಯ ತಂತ್ರ ರೂಪಿಸುವುದರಲ್ಲಿ ನಿರತ.
ಇವನ್ನೆಲ್ಲ ಬಿಟ್ಟು, ಒಂದು ಪಂಚಾಯ್ತಿಯನ್ನು ಹೇಗೆ ನಡೆಸಬಹುದು ಎಂಬುದನ್ನು ‘ರಾಸ್’ ನೋಡಿ ನಾವು ಕಲಿಯಬೇಕು.
ವಿವರಗಳಿಗೆ ನೋಡಿ. http://www.townofross.org

No comments: