Saturday, December 27, 2008

ಅಮೇರಿಕಾ - ಮೇಡ್ ಇನ್ ಚೈನಾ


ಭಾಗ - 7

ಚೀನಾ ಸರಕಿಲ್ಲದೇ ಅಮೆರಿಕದಲ್ಲಿ ಬದುಕಬಹುದು.
ಆದರೆ, ಅದು ಅತ್ಯಂತ ಕಷ್ಟದ ಬದುಕು!

ಒಂದು ಜೋಕಿದೆ.
ಅಮೆರಿಕದಲ್ಲಿ ಮೇಡ್-ಇನ್-ಅಮೆರಿಕಾ ಅಂತ ಏನಾದ್ರೂ ಇದ್ರೆ ಅದು ರಾಕೆಟ್ಟು, ಮಿಸೈಲು, ಸ್ಯಾಟಲೈಟು, ಅಣು ಬಾಂಬು ಮುಂತಾದ ಯುದ್ಧ ಸಾಮಗ್ರಿ ಮಾತ್ರ. ಉಳಿದಂತೆ ಅಮೆರಿಕದಲ್ಲಿ ಸಿಗೋದೆಲ್ಲಾ ಮೇಡ್-ಇನ್-ಚೈನಾ ಮಾಲು!
ಇದೊಂಥರಾ ಜೋಕಾದ್ರೂ, ವಾಸ್ತವ ಕೂಡ ಬೇರೆ ಅಲ್ಲ.

ಸಾರಾ ಬೊಂಜೋರ್ನಿ ಎಂಬ ಪತ್ರಕರ್ತೆ An Year Without -'Made In China' (ಮೇಡ್-ಇನ್-ಚೈನಾ ಇಲ್ಲದ ಒಂದು ವರುಷ) ಎಂಬ ಅಪರೂಪದ ಪುಸ್ತಕ ಬರೆದಿದ್ದಾಳೆ. ಚೀನಾದಲ್ಲಿ ತಯಾರಾದ ಯಾವುದೇ ವಸ್ತುವನ್ನೂ ಖರೀದಿಸದೇ ಅಮೆರಿಕದಲ್ಲಿ ಬದುಕಲು ಸಾಧ್ಯವಿಲ್ಲವೇ? ಎಂಬುದನ್ನು ಪರೀಕ್ಷಿಸಲು ಆಕೆ ಒಂದು ವರ್ಷ ಪ್ರಯೋಗ ಮಾಡುತ್ತಾಳೆ. ಹೊಸ ವರ್ಷದ ಆರಂಭದಲ್ಲಿ ಇದನ್ನೇ ‘ನ್ಯೂ ಇಯರ್ ರೆಸಲ್ಯೂಶನ್’ ಎಂದು ಶಪಥ ಮಾಡುತ್ತಾಳೆ. ಚೀನಾ ಮಾಲು ಬೇಡವೆಂದು, ಅಮೆರಿಕದಲ್ಲೇ ತಯಾರಾದ ಉತ್ಪನ್ನ ಬೇಕೆಂದು ಆಕೆ ಊರೆಲ್ಲ ಹುಡುಕುತ್ತಾಳೆ. ಕೆಲವು ಬಾರಿಯಂತೂ ಆಕೆಗೆ ಚೀನಾ ಮಾಲಿನ ಹೊರತಾಗಿ ಬೇರೆ ಉತ್ಪನ್ನವೇ ಸಿಗುವುದಿಲ್ಲ. ಕೆಲವೊಮ್ಮೆ ಸಿಕ್ಕರೂ ಉತ್ಪನ್ನಕ್ಕಿಂತ ಆಕೆ ಹುಡುಕಾಟಕ್ಕೇ ಹೆಚ್ಚು ವೆಚ್ಚಮಾಡಿರುತ್ತಾಳೆ. ತನ್ನ ಶಪಥಕ್ಕಾಗಿ ಆಕೆ ಒಂದು ವರ್ಷ ಪರದಾಡುತ್ತಾಳೆ. ಆಕೆ ತನ್ನ ಈ ನೈಜ ಅನುಭವ ಕಥನದಲ್ಲಿ ಹೇಳುತ್ತಾಳೆ -‘ಚೀನಾ ಸರಕಿಲ್ಲದೇ ಅಮೆರಿಕದಲ್ಲಿ ಬದುಕಬಹುದು. ಆದರೆ, ಅದು ಅತ್ಯಂತ ಕಷ್ಟದ ಬದುಕು‘ ಅಂತ.

ಕಳೆದ ಅಕ್ಟೋಬರ್‌ನಲ್ಲಿ ನಾನು ಅಮೆರಿಕದ ಬೇರೆ ಬೇರೆ ರಾಜ್ಯಗಳಲ್ಲಿ, ಸಣ್ಣ ದೊಡ್ಡ ಊರುಗಳಲ್ಲಿ ಅಲೆಯುತ್ತಿರುವಾಗ ನನಗಾದ ಅನುಭವವೂ ಇದೇ. ಅಮೆರಿಕದಲ್ಲಿ ಮಾರಾಟವಾಗುವ ಗ್ರಾಹಕ ಸರಕಿನಲ್ಲಿ ಚೀನಾದ್ದೇ ಸಿಂಹಪಾಲು. ಆಹಾರ ಪದಾರ್ಥ, ಇಲೆಕ್ಟ್ರಿಕ್ ಉಪಕರಣಗಳು, ಇಲೆಕ್ಟ್ರಾನಿಕ್ ಸರಕುಗಳಿಂದ ಹಿಡಿದು, ಪುಟಾಣಿ ಮಕ್ಕಳ ಆಟಿಕೆಗಳು, ದೊಡ್ಡವರ ವಿಡಿಯೋ ಗೇಮ್ ಸಲಕರಣೆಗಳವರೆಗೆ ಅಮೆರಿಕಾ ತುಂಬಾ ತುಂಬಿರೋದು ಚೀನಾ ಉತ್ಪನ್ನಗಳು. ಕೆಲವು ವರ್ಗದ ಸರಕಿನಲ್ಲಿ ಚೀನಾ ಮಾಲಲ್ಲದೇ ಬೇರೇ ಮೂಲದ ಉತ್ನನ್ನಗಳೇ ಇಲ್ಲ. ಅಷ್ಟರ ಮಟ್ಟಿಗೆ ಅಮೆರಿಕಾ ಈಸ್ ಮೇಡ್ ಇನ್ ಚೈನಾ!

ಚೀನಾ ಬಿಟ್ಟು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಥೈಲ್ಯಾಂಡ್‌ನಂಥ ಏಷ್ಯಾ ದೇಶಗಳಲ್ಲಿ ಹಾಗೂ ಬ್ರೆಝಿಲ್, ನಿಕಾರಾಗುವದಂಥ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ತಯಾರಾದ ಸರಕೂ ಅಮೆರಿಕದಲ್ಲಿ ಸಾಕಷ್ಟಿವೆ. ಆದರೆ, ಚೀನಾ ಉತ್ಪನ್ನಗಳೇ ಹೆಚ್ಚು. ಮೇಡ್-ಇನ್-ಅಮೆರಿಕ ಸರಕು ನಿಜಕ್ಕೂ ಅಪರೂಪ.

ಇದಕ್ಕೇನು ಕಾರಣ?

ಅದ್ಯಾಕೆ, ಅಮೆರಿಕದಲ್ಲಿ ಚೀನಾ ಮಾಲು ಇಷ್ಟೊಂದು ತುಂಬಿಹೋಗಿದೆ?

೧. ಒಂದು ಕಾಲದಲ್ಲಿ, ಅಮೆರಿಕದಲ್ಲಿ ಎಷ್ಟು ದುಬಾರಿಯಾದರೂ ಪರವಾಗಿಲ್ಲ, ಉನ್ನತ ಬ್ರಾಂಡಿನ ಸರಕು ಮಾತ್ರ ಬೇಕು ಎನ್ನುವ ಜನರಿದ್ದರು. ಈಗ ಚೀನಾ ಉತ್ಪನ್ನಗಳು ಅಷ್ಟೇನೂ ಉತ್ತಮ ಗುಣಮಟ್ಟದಲ್ಲ ಎನ್ನುವ ಅರಿವಿದ್ದರೂ ಹಣ ಉಳಿತಾಯಕ್ಕೆಂದು ಆ ಮಾಲುಗಳಿಗೇ ಮೊರೆ ಹೋಗಿರುವ ಮಧ್ಯಮವರ್ಗ ಹಾಗೂ ಬಡ ಜನರ ವರ್ಗ ಅಮೆರಿಕದಲ್ಲಿ ಸಾಕಷ್ಟಾಗಿದೆ. ಆದ್ದರಿಂದ ಚೀನಾ ಮಾಲಿಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಈಗ ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ದುಬಾರಿ ಬ್ರಾಂಡೆಡ್ ಸರಕಿಗಿಂತ ಅಗ್ಗದ ಚೀನಾ ಮಾಲಿಗೇ ಡಿಮಾಂಡು ಸಹಜ.

೨. ಐತಿಹಾಸಿಕವಾಗಿ ನೋಡಿದರೆ, ರಷ್ಯಾ ಮತ್ತು ಚೀನಾ ಕಮ್ಯುನಿಷ್ಟ್ ದೇಶಗಳು. ತಾತ್ವಿಕವಾಗಿ ಅಮೆರಿಕಕ್ಕೆ ವೈರಿ ರಾಷ್ಟ್ರಗಳು. ಈಗಲೂ, ಈ ದೇಶಗಳ ನಡುವೆ ಶೀತಲ ಸಮರ ಇದೆ. ಆದರೆ, ಈ ವೈರತ್ವವನ್ನು ಬಿಟ್ಟು ಚೀನಾದಿಂದ ಅಮೆರಿಕ ಅಂದಾಜು ೨೯೦ ಬಿಲಿಯನ್ ಡಾಲರ್ ಸರಕನ್ನು ಆಮದು ಮಾಡಿಕೊಳ್ಳುತ್ತಿದೆ. ಇದೆಲ್ಲಾ ಜಾಗತೀಕರಣದ ಪ್ರಭಾವ. ೧೯೭೦ರ ಹೊತ್ತಿಗೆ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾದಿಂದ ಸರಕು ಆಮದಿಗೆ ಬಾಗಿಲು ತೆರೆದರು. ಚೀನಾ ಕೂಡ ೧೯೮೦ ಹಾಗೂ ೧೯೯೦ರ ದಶಕದಲ್ಲಿ ತನ್ನ ಬಿಗಿ ಕಮ್ಯುನಿಷ್ಟ್ ನೀತಿಯ ನಡುವೆಯೇ ಜಾಗತಿಕ ಆರ್ಥಿಕ ನೀತಿಯನ್ನು ಅಳವಡಿಸಿಕೊಂಡಿತು. ಪರಿಣಾಮವಾಗಿ ಜಗತ್ತಿಗೆ ಚೀನಾ ಬಹುದೊಡ್ಡ ಮಾರುಕಟ್ಟೆಯಾಯಿತು.

೩. ಅಮೆರಿಕದ ವಾಲ್‌ಮಾರ್ಟ್‌ನಂಥ ರಿಟೇಲ್ ದೈತ್ಯ ಕಂಪನಿಗಳಿಗೆ ಸೋವಿ ದರದಲ್ಲಿ ಚೀನಾದಲ್ಲಿ ಸರಕು ಸಿಗಲಾರಂಭಿಸಿತು. ಅಲ್ಲದೇ, ಸ್ವಂತ ಬ್ರಾಂಡ್ ಪದಾರ್ಥಗಳ ಉತ್ಪಾದನೆ ಅಮೆರಿಕಕ್ಕಿಂತ ಚೀನಾದಲ್ಲಿ ಅಗ್ಗವಾಗಿ ಕಂಡಿತು. ಏಕೆಂದರೆ, ಚೀನಾದಲ್ಲಿ ಕೂಲಿ ದರ ಹಾಗೂ ಉತ್ಪಾದನಾ ವೆಚ್ಚ ಕಮ್ಮಿ. ಅಲ್ಲದೇ, ಅಮೆರಿಕದ ಪಶ್ಚಿಮ ಕರಾವಳಿಗೆ ಚೀನಾದಿಂದ ಸರಕು ಸಾಗಣೆ ವೆಚ್ಚವೂ ದುಬಾರಿಯಲ್ಲ. ಈ ಆರ್ಥಿಕ ಕಾರಣದಿಂದ ಅಮೆರಿಕದ ತುಂಬಾ ಚೀನಾ ಚೀನಾ ಚೀನಾ ಮಾಲ್.

೪. ಇನ್ನು ಅಂತಾರಾಷ್ಟ್ರೀಯ ರಾಜನೀತಿಯನ್ನು ತುಸು ಗಮನಿಸಬೇಕು. ಚೀನಾ ಅರ್ಥವ್ಯವಸ್ಥೆ ಅಮೆರಿಕದ ಮೇಲೆ ಅವಲಂಬನೆಯಾದಷ್ಟೂ ಅಮೆರಿಕಕ್ಕೆ ಖುಷಿ! ಏಕೆಂದರೆ, ಚೀನಾ ಮುಂದೊಂದು ದಿನ ಶ್ರೀಮಂತ ಅಮೆರಿಕವನ್ನು ವಿರೋಧಿಸಿ ಬಡ ದೇಶವಾದ ರಷ್ಯಾದ ಪರ ನಿಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ. ಹಾಗೊಂದು ವೇಳೆ ಚೀನಾ ಅಮೆರಿಕವನ್ನು ಎದುರು ಹಾಕಿಕೊಂಡರೆ ಚೀನಾ ಬಹುದೊಡ್ಡ ರಫ್ತು ಮಾರುಕಟ್ಟೆಯನ್ನು ಕಳೆದುಕೊಂಡು ಕಂಗಾಲಾಗಬೇಕಾಗುತ್ತದೆ. ಅದರಲ್ಲೂ, ಅಮೆರಿಕ ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳು ಚೀನಾ ವಿರುದ್ಧ ಆರ್ಥಿಕ ದಿಗ್ಬಂಧನ ಹಾಕಿದರಂತೂ ಚೀನಾದ ಆರ್ಥಿಕ ವ್ಯವಸ್ಥೆ ತೀವ್ರ ಹದಗೆಡುತ್ತದೆ. ಈ ರೀತಿಯಲ್ಲಿ ಚೀನಾವನ್ನು ಆರ್ಥಿಕವಾಗಿ ನಿಯಂತ್ರಿಸುವುದು ಅಮೆರಿಕದ ಲೆಕ್ಕಾಚಾರ. ಆದ್ದರಿಂದ, ಚೀನಾ ಹೆಚ್ಚು ಹೆಚ್ಚು ಅಮೆರಿಕದ ಮಾರುಕಟ್ಟೆಯನ್ನು ಅವಲಂಬಿಸುವಂತೆ ಅಮೆರಿಕವೇ ಪ್ರಚೋದಿಸುತ್ತಿದೆ.


ಚೀನಾ ವಿರುದ್ಧ ಆಂದೋಲನ :

ಅಮೆರಿಕದಲ್ಲಿ ಚೀನಾ ಮಾಲ್ ಹಾವಳಿ ವಿರುದ್ಧ ಒಂದಷ್ಟು ಆಂದೋಲನಗಳೂ ನಡೆದಿವೆ. ‘ಚೀನಾ ಸಾಮಗ್ರಿ ಕೊಂಡರೆ ಚೀನಾ ಶ್ರೀಮಂತ ಆಗುತ್ತದೆ. ಹಾಗೆ ಶ್ರೀಮಂತವಾಗುವ ಚೀನಾ ಅಮೇರಿಕದತ್ತ ಅಣುಬಾಂಬ್ ತಿರುಗಿಸುತ್ತದೆ. ಆದ್ದರಿಂದ ಚೀನಾ ಸರಕನ್ನು ಕೊಳ್ಳಬೇಡಿ’ ಎಂದು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪ್ರಚಾರ ಮಾಡಿದವು. ಆದರೆ, ಆ ಪ್ರಚಾರಕ್ಕೆ ಫಲ ಸಿಕ್ಕಿಲ್ಲ. ಏಕೆಂದರೆ, ಚೀನಾ ಸರಕು ಕೊಳ್ಳದೇ ಅಮೆರಿಕದಲ್ಲಿ ಬದುಕುವುದು ಕಷ್ಟ!

-----------------

ಅಮೆರಿಕ ಶಾಲೆಯಲ್ಲಿ ಚೀನಿ ಭಾಷೆ ಕಲಿತಾವೆ ಇಂಗ್ಲೀಷ್ ಮಕ್ಕಳು!

ಚೀನೀಯರಿಗೆ ಇಂಗ್ಲೀಷ್ ಬರಲ್ಲ. ಅದಕ್ಕೇ ಐಟಿ ಕ್ಷೇತ್ರದಲ್ಲಿ ಚೀನಾ ಭಾರತಕ್ಕಿಂತ ಹಿಂದುಳಿದಿದೆ. ಚೀನೀ ಮಂದಿ ಇಂಗ್ಲೀಷ್ ಕಲಿಯೋವರೆಗೂ ಉದ್ದಾರ ಆಗೋಲ್ಲ - ಅನ್ನುವವರು ಈಗ ತುಸು ಯೋಚಿಸಬೇಕು.
ಜಾಗತಿಕವಾಗಿ ಚೀನಾ, ಭಾರತಕ್ಕಿಂತ ಎಷ್ಟು ಬಲವಾಗುತ್ತಿದೆ ಅಂದರೆ, ಇಂಗ್ಲೀಷ್ ಮಂದಿಯೇ ಈಗ ಚೀನೀ ಭಾಷೆ ಕಲಿಯಲು ಆರಂಭಿಸಿದ್ದಾರೆ! ಅಮೆರಿಕದಂಥ ಅಮೆರಿಕದ ಶಾಲೆಯಲ್ಲಿ ‘ಮ್ಯಾಂಡರಿನ್’ಕಲಿಸಲಾಗುತ್ತಿದೆ. ಭಾರತದಲ್ಲಿ, ಮಕ್ಕಳು ಇಂಗ್ಲೀಷ್ ಕಲಿಯಬೇಕೆಂದು ಪಾಲಕರು ಹಂಬಲಿಸುತ್ತಾರಷ್ಟೇ? ಅದೇ ರೀತಿ ಅಮೆರಿಕ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಎರಡು ಅಥವಾ ಮೂರನೇ ಭಾಷೆಯಾಗಿ ‘ಮ್ಯಾಂಡರಿನ್’ ಕಲಿಯುವಂತೆ ಪೋಷಕರು ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ.
‘ಈ ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಈಗ ಫ್ರೆಂಚ್, ಸ್ಪಾನಿಷ್‌ಗೆ ಇರುವಂತೆ ಚೀನೀ ಭಾಷೆಗೂ ಬೇಡಿಕೆ ಇರುತ್ತದೆ’ ಎನ್ನುತ್ತಾರೆ ಅಂತಹ ಒಬ್ಬ ಪಾಲಕ ಮೈಕೆಲ್ ರೊಸೇನ್‌ಬಾಮ್. ನಮ್ಮ ಹಿಂದಿ ಭಾಷೆಯನ್ನು, ಚೀನಿ ಭಾಷೆಯಂತೆ ಜಗತ್ತು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಯಾಕೆ? ಸ್ವಲ್ಪ ಯೋಚಿಸಿ.

--------------

ಒಳಚರಂಡಿ ಮೇಲೆ ಕಂಡೆಯಾ... ಮೇಡ್ ಇನ್ ಇಂಡಿಯಾ?

ವಾಲ್‌ಮಾರ್ಟ್, ಟಾರ್ಗೆಟ್, ವಾಲ್‌ಗ್ರೀನ್ಸ್ ಮುಂತಾದ ಅನೇಕ ರಿಟೇಲ್ ಮಳಿಗೆಗೆ ಹೋದಾಗ ನನಗೆ ಕಾಣಿಸುತ್ತಿದ್ದುದು ಬಹುತೇಕ ಮೇಡ್-ಇನ್-ಚೈನಾ ಉತ್ಪನ್ನ. ಹಾಗಾದರೆ, ಮೇಡ್ ಇನ್ ಇಂಡಿಯಾ ಏನೂ ಇಲ್ಲವೇ ಅಂತ ಬಹಳ ಹುಡುಕಿದೆ. ಕೊನೆಗೂ ನ್ಯೂಯಾರ್ಕ್ ಸಿಟಿ ಹಾಗೂ ಲಾಸ್ ವೇಗಾಸ್‌ನ ಒಳಚರಂಡಿ ಮುಚ್ಚಳದ ಮೇಲೆ ಕಂಡಿತು ಮೇಡ್ ಇನ್ ಇಂಡಿಯಾ! ತಮಾಷೆಯಲ್ಲ.

Saturday, December 20, 2008

ನ್ಯೂಸಿಯಂ : ಇಲ್ಲಿ ಸುದ್ದಿಗೆ ಸಾವಿಲ್ಲ...!


ಭಾಗ - 6

ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಹಡಗಿನ ಈ ‘ವರ್ಣ ಚಿತ್ರ’ ಆ ಪತ್ರಿಕೆಯ ಮುಖಪುಟದ ಮೇಲಿನರ್ಧಭಾಗದಲ್ಲಿ ಮುದ್ರಿತವಾಗಿತ್ತು! ಆಗಿನ ಕಾಲದಲ್ಲಿ, ಪತ್ರಿಕೆಗಳಲ್ಲಿ ಬಣ್ಣದ ಮುದ್ರಣ ತಂತ್ರಜ್ಞಾನವೇ ಇರಲಿಲ್ಲ. ಹಾಗಾದರೆ, ಆ ಪತ್ರಿಕೆ ೧೮೪೦ನೇ ಇಸವಿಯಲ್ಲೇ ಬಣ್ಣದ ಚಿತ್ರ ಪ್ರಕಟಿಸಿದ್ದು ಹೇಗೆ?



ಈಹಳೇ ಸುದ್ದಿ ಕೇಳಿ ನನ್ನಂತೆ ನಿಮಗೂ ಅಚ್ಚರಿ ಆಗಬಹುದು!

೧೮೪೦ರ ಜನವರಿ ತಿಂಗಳು. ಅಮೆರಿಕದ ಲೆಕ್ಸಿಂಗ್‌ಟನ್ ಎಂಬ ವಿಲಾಸೀ ಹಡಗಿನ ಗ್ರಹಚಾರ ಸರಿ ಇರಲಿಲ್ಲ. ನ್ಯೂಯಾರ್ಕ್ ಬಂದರಿನಿಂದ ಸುಮಾರು ೫೦ ಮೈಲು ದೂರದಲ್ಲಿ ಸಮುದ್ರದ ನಟ್ಟ ನಡುವೆ ಅದಕ್ಕೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ಗಂಟೆಗಳಲ್ಲಿ ಧಗಧಗನೆ ಉರಿದು, ಅದು ಸಮುದ್ರದಲ್ಲಿ ಮುಳುಗಿಹೋಯಿತು. ಇದ್ದ ೧೬೦ ಜನರಲ್ಲಿ ಕೇವಲ ನಾಲ್ವರು ಬದುಕುಳಿದರು. ವಿಷಯ ಅದಲ್ಲ. ಆ ಸುದ್ದಿಯನ್ನು ಪ್ರಕಟಿಸಿದ ‘ನ್ಯೂಯಾರ್ಕ್ ಸನ್’ ಪತ್ರಿಕೆಯ ಸಾಹಸವನ್ನು ಸ್ವಲ್ಪ ಕೇಳಿ.

ಈ ದುರಂತದ ವರದಿಗಾಗಿ ‘ನ್ಯೂಯಾರ್ಕ್ ಸನ್’ ಪತ್ರಿಕೆ ವಿಶೇಷ ‘ಎಕ್ಸ್‌ಟ್ರಾ’ ಆವೃತ್ತಿಯನ್ನು ಹೊರತಂದಿತ್ತು. ನೀಲ ಸಮುದ್ರದ ನಡುವೆ ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಲೆಕ್ಸಿಂಗ್‌ಟನ್ ಹಡಗಿನ ದೊಡ್ಡ ‘ವರ್ಣ ಚಿತ್ರ’ ಆ ಸಂಚಿಕೆಯ ಮುಖಪುಟದ ಮೇಲಿನರ್ಧಭಾಗದಲ್ಲಿ ಮುದ್ರಿತವಾಗಿತ್ತು! ಆಗಿನ ಕಾಲದಲ್ಲಿ, ಪತ್ರಿಕೆಗಳಲ್ಲಿ ಬಣ್ಣದ ಮುದ್ರಣ ತಂತ್ರಜ್ಞಾನವೇ ಇರಲಿಲ್ಲ. ಹಾಗಾದರೆ, ‘ನ್ಯೂಯಾರ್ಕ್ ಸನ್’ ೧೮೪೦ನೇ ಇಸವಿಯಲ್ಲೇ ಬಣ್ಣದ ಚಿತ್ರ ಪ್ರಕಟಿಸಿದ್ದು ಹೇಗೆ?

ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಕಪ್ಪು ಬಿಳುಪು ಚಿತ್ರದ ಆ ಪತ್ರಿಕೆಯನ್ನು ಮೊದಲು ಲಿಥೋಗ್ರಾಫ್‌ನಲ್ಲಿ ಮುದ್ರಿಸಿ, ನಂತರ ಎಷ್ಟೋ ಪ್ರತಿಗಳಿಗೆ ಕಲಾವಿದರು ತಮ್ಮ ಕೈಯಾರೆ ಬಣ್ಣ ಹಚ್ಚಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು! ೧೬೮ ವರ್ಷದ ಹಿಂದಿನ ಈ ಅಪೂರ್ವ ಪತ್ರಿಕೆಯನ್ನು ನ್ಯೂಸಿಯಂನಲ್ಲಿ ಸಾಕ್ಷಾತ್ ಕಂಡಾಗ ಅಂದಿನ ಪತ್ರಿಕಾ ಸಾಹಸಕ್ಕೆ ಯಾರಾದರೂ ನಮೋ ನಮಃ ಎನ್ನಲೇಬೇಕು.

ಜಗತ್ತಿನಲ್ಲಿ ಪತ್ರಿಕೆಗಳು ಆರಂಭವಾದಾಗ ಅವು ಈಗಿನಂತೆ ಪತ್ರಿಕಾ ರೂಪದಲ್ಲಿ ಇರಲಿಲ್ಲ. ಪುಸ್ತಕ ರೂಪದಲ್ಲಿ ಇದ್ದವು. ಅವುಗಳನ್ನು ‘ಸುದ್ದಿ ಪುಸ್ತಕ’ ಎಂದು ಕರೆಯಲಾಗುತ್ತಿತ್ತು. ನಂತರ ಅವು ‘ವಾರ್ತಾ ಪತ್ರ’ಗಳ ರೂಪ ಪಡೆದವು. ಕ್ರಮೇಣ ಈಗಿನಂತೆ ಪತ್ರಿಕೆಯ ಗಾತ್ರ ಹಾಗೂ ಲಕ್ಷಣ ಪಡೆದವು ಎಂಬುದನ್ನು ಪತ್ರಿಕೋದ್ಯಮ ಇತಿಹಾಸದಲ್ಲಿ ಓದಿರಬಹುದು. ಆದರೆ, ಅವುಗಳನ್ನು ನ್ಯೂಸಿಯಂನಲ್ಲಿ ಕಣ್ಣಾರೆ ನೋಡಬಹುದು. ಓದಬಹುದು. ಇಲ್ಲಿ ಅಮೆರಿಕದ ಮೊದಲ ಪತ್ರಿಕೆಯಿಂದ ಹಿಡಿದು ೬೫ ದೇಶಗಳ ಆಯ್ದ ೬೮೮ ಪತ್ರಿಕೆಗಳ ಈ ಕ್ಷಣದ ಮುಖಪುಟವನ್ನು ಇಲ್ಲಿ ಕಾಣಬಹುದು. ೬೮೯ನೇ ಪತ್ರಿಕೆಯಾಗಿ ‘ಕನ್ನಡಪ್ರಭ’ದ ಮುಖಪುಟ ಇದೀಗ ಸೇರಿಕೊಂಡಿದ್ದು, ಇಂದಿನಿಂದ ನ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇಲ್ಲಿ ಕ್ಲಿಕ್ ಮಾಡಿ

೨ನೇ ಮಹಾಯುದ್ಧದ ೪-ಡಿ ಸಿನಿಮಾ

ಎಡ್ವರ್ಡ್ ಆರ್ ಮರ್ರೋ ಎಂಬ ಅಮೆರಿಕದ ಮಹಾನ್ ರೇಡಿಯೋ ವರದಿಗಾರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಲಂಡನ್‌ನ ಕಟ್ಟಡವೊಂದರ ತಾರಸಿಯ ಮೇಲೆ ನಿಂತುಕೊಂಡು, ಜರ್ಮನಿಯ ವಿಮಾನಗಳು ಬಾಂಬ್ ಹಾಕುತ್ತಿರುವ ಸುದ್ದಿಯನ್ನು ರೇಡಿಯೋದಲ್ಲಿ ನೇರ ವರದಿ ಮಾಡಿದ. ನೇರ ಪ್ರಸಾರ ವರದಿಗಾರಿಕೆಯ ಆರಂಭ ಎಂದು ಗುರುತಿಸಲ್ಪಡುವ ಈ ಘಟನೆ ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ, ಆ ಸಂದರ್ಭವನ್ನು ನ್ಯೂಸಿಯಂನ ‘೪-ಡಿ’ ಟಾಕೀಸಲ್ಲಿ ಅನುಭವಿಸಬಹುದು.



ಈ ಟಾಕೀಸ್ ‘೩-ಡಿ’ಗಿಂತ ಅದ್ಭುತ ಅನುಭವ ನೀಡುತ್ತದೆ. ದೂರದಿಂದ ರೋಯ್ಯನೆ ಬರುವ ಬಾಂಬರ್ ವಿಮಾನ ನಮ್ಮ ತಲೆಯ ಮೇಲೇ ಬಂದಂತಾಗಿ ತಲೆಗೂದಲೆಲ್ಲಾ ಗಾಳಿಗೆ ಹಾರಾಡುತ್ತದೆ. ಗುಡುಗು ಸಿಡಿಲು ಆರ್ಭಟಿಸಿ ಮಳೆ ಸುರಿಯುವ ಲಕ್ಷಣ ಕಾಣಿಸಿದಾಗ ನಮ್ಮ ಮೇಲೂ ನಿಜವಾದ ಹನಿಗಳು ಬಿದ್ದು ವಾಸ್ತವ ಬಯಲಿನ ಅನುಭವ ಆಗುತ್ತದೆ. ಜೈಲಿನೊಳಗೆ ಇಲಿಗಳು ಕಿಚಿಕಿಚ ಎನ್ನುತ್ತ ಓಡಾಡುವಾಗ ಅವು ನಮ್ಮ ಕಾಲಮೇಲೇ ಓಡಾಡಿದಂತೆ ಸ್ಪರ್ಷಾನುಭವವಾಗುತ್ತದೆ. ಹಾವು ಭುಸ್ಸನೆ ವಿಷ ಉಗುಳಿದಾಗ ಅಕ್ಷರಶಃ ಮುಖದ ಮೇಲೆ ಸಿಂಚನವಾಗುತ್ತದೆ! ಇಂಥ ಟಾಕೀಸಿನಲ್ಲಿ, ಮೂರು ಬೇರೆ ಬೇರೆ ವರದಿಗಾರರ ಕಿರುಚಿತ್ರ ನೋಡುವಾಗ ನಾವು ನ್ಯೂಸಿಯಂ ನಲ್ಲಿದ್ದೇವೋ... ಅಥವಾ ಆ ವರದಿಗಾರರ ಜೊತೆ, ಅವರ ಕಾಲದಲ್ಲೇ ಇದ್ದೇವೋ ಎಂದು ಗೊತ್ತಾಗದಷ್ಟು ಗಾಢ ಅನುಭವವಾಗುತ್ತದೆ.

ವಾಷಿಂಗ್‌ಟನ್‌ನ ಹೃದಯದಲ್ಲಿ

ಅಂದಹಾಗೆ, ನ್ಯೂಸಿಯಂ ಎಂದರೆ, ನ್ಯೂಸ್ ಮ್ಯೂಸಿಯಂ. ಸುದ್ದಿಯ ವಸ್ತು ಸಂಗ್ರಹಾಲಯ. ವಾಷಿಂಗ್‌ಟನ್ ಡಿ.ಸಿ.ಯ ಮುಖ್ಯ ಬೀದಿಯಲ್ಲಿ, ಯು.ಎಸ್. ಕ್ಯಾಪಿಟಾಲ್ ಹಾಗೂ ವೈಟ್‌ಹೌಸ್ ನಡುವೆ ಇದೆ. ೧೯೯೭ರಲ್ಲಿ ನ್ಯೂಸಿಯಂ ಆರಂಭಗೊಂಡಾಗ ಅಮೆರಿಕದ ಹೃದಯವೆಂದೇ ಬಣ್ಣಿಸಲಾಗುವ ಈ ಪ್ರದೇಶದಲ್ಲಿ ಇರಲಿಲ್ಲ. ರಾಜಧಾನಿಯಿಂದ ಹೊರಗೆ ಪೋಟೋಮ್ಯಾಕ್ ನದಿಯ ಇನ್ನೊಂದು ತಟದಲ್ಲಿ ಹಳೆಯ ಸಣ್ಣ ಕಟ್ಟಡದಲ್ಲಿತ್ತು. ಆದರೆ, ಜಗತ್ತಿನ ಗಮನ ಸೆಳೆಯಲೆಂದು ಇದು ಈಗಿನ ಸ್ಥಳಕ್ಕೆ ಸ್ಥಳಾಂತರಗೊಂಡಿದೆ.
ವಿಶೇಷವೆಂದರೆ, ಯುಎಸ್ ಕ್ಯಾಪಿಟಾಲ್ ಬಳಿ ಖಾಲಿಯಿದ್ದ ಏಕೈಕ ಸೈಟು ಇದಾಗಿತ್ತು. ಈ ನಿವೇಶನದಲ್ಲಿ ೪೫೦ ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಬದಲಾವಣೆಯ ಹಿನ್ನೆಲೆಯಲ್ಲಿ ೨೦೦೨ರಲ್ಲಿ ಬಾಗಿಲು ಮುಚ್ಚಿದ್ದ ಹಳೆಯ ನ್ಯೂಸಿಯಂ ಈ ವರ್ಷ ಏಪ್ರಿಲ್‌ನಿಂದ ಹೊಸ ರೂಪದಲ್ಲಿ ಪುನಾರಂಭಗೊಂಡಿದೆ.

ಇದು ಸರ್ಕಾರಿ ಮ್ಯೂಸಿಯಂ ಅಲ್ಲ. ಫ್ರೀಡಂ ಫೋರಂ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದ ಖಾಸಗಿ ಮ್ಯೂಸಿಯಂ. ಈ ನ್ಯೂಸಿಯಂ ಎದುರಿನ ಪ್ರದೇಶವೇ ‘ನ್ಯಾಷನಲ್ ಮಾಲ್’. ಇಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಮೆರಿಕದ ಹತ್ತಾರು ಮ್ಯೂಸಿಯಂಗಳು, ಜಾರ್ಜ್ ವಾಷಿಂಗ್‌ಟನ್, ಕೆನಡಿ, ಜಾಫರ್‌ಸನ್, ಲಿಂಕನ್ ಮುಂತಾದ ಗಣ್ಯರ ಸ್ಮಾರಕಗಳೂ ಇವೆ. ವಾಷಿಂಗ್‌ಟನ್ ಡಿ.ಸಿ.ಗೆ ಬಂದ ಪ್ರವಾಸಿಗರ್ಯಾರೂ ಈ ಪ್ರದೇಶ ನೋಡದೇ ವಾಪಸಾಗುವುದೇ ಇಲ್ಲ. ಇಂಥ ಅಪರೂಪದ ಸ್ಥಳಕ್ಕೆ ಹೊಂದಿಕೊಂಡತೆಯೇ ಇರುವುದರಿಂದ ನ್ಯೂಸಿಯಂಗೆ ಇನ್ನಷ್ಟು ಕಳೆ ಹಾಗೂ ಮಹತ್ವ.

ಈ ಏಳು ಮಹಡಿಯ ೨,೫೦,೦೦೦ ಚದರಡಿ ಕಟ್ಟಡದ, ೧೪ ವಿಭಾಗ ಮತ್ತು ೧೫ ಥೇಟರಿನಲ್ಲಿ ಸುಮಾರು ೫೦೦ ವರ್ಷದ ಅಚ್ಚರಿಯ ಸುದ್ದಿಗಳು ಇಂದೂ ತಮ್ಮ ಐತಿಹಾಸಿಕ ಕಥೆ ಹೇಳುತ್ತಿವೆ. ‘ಸುದ್ದಿಯ ಆಯಸ್ಸು ಒಂದೇ ದಿನ. ನ್ಯೂಸ್ ಪೇಪರ್ ಬೆಳಿಗ್ಗೆ ಹುಟ್ಟಿ ಸಂಜೆ ಸಾಯುತ್ತದೆ’ ಎಂದು ಹೇಳುವವರು ಈ ನ್ಯೂಸಿಯಂ ನೋಡಿ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಬಹುದು.
ಹಿಸ್ಟರಿ ಆಫ್ ನ್ಯೂಸ್ ವಿಭಾಗ ನೋಡುತ್ತಾ ಹೋದಂತೆ, ಎರಡನೇ ಮಹಾಯುದ್ಧ ಆರಂಭವಾದ ಸುದ್ದಿ, ಮುಕ್ತಾಯವಾದ ಸುದ್ದಿ, ಹಿಟ್ಲರ್ ಹತಗೊಂಡ ಸಮಾಚಾರ, ಮಾನವ ಚಂದ್ರನ ಮೇಲೆ ಕಾಲಿಟ್ಟ ವರದಿ, ಕೆನಡಿ, ರೇಗನ್, ಲಿಂಕನ್ ಹತ್ಯೆಯಾದ ಘಟನೆ, ಟೈಟಾನಿಕ್ ಮುಳುಗಿದ ವಾರ್ತೆ... ಹೀಗೆ ಅನೇಕ ಐತಿಹಾಸಿಕ ಘಟನೆಗಳು ಪತ್ರಿಕೆಯ ಪುಟಗಳ ರೂಪದಲ್ಲಿ ಜೀವಂತಗೊಳ್ಳತೊಡಗುತ್ತವೆ.

ಬಾಸ್ಟರ್ಡ್ಸ್!

ಅಲ್ ಖೈದಾ ಉಗ್ರರು ಅವಳಿ ಗೋಪುರದ ಮೇಲೆ ವಿಮಾನ ದಾಳಿ ಮಾಡಿದ ೯/೧೧ ಘಟನೆ ಅಮೆರಿಕವನ್ನು ನಿದ್ದೆಯಲ್ಲೂ ಬೆಚ್ಚಿಬೀಳಿಸುವ ಸುದ್ದಿ. ಈ ವಾರ್ತೆಯನ್ನು ಯಾವ್ಯಾವ ಪತ್ರಿಕೆಗಳು ಹೇಗ್ಹೇಗೆ ವರದಿ ಮಾಡಿದ್ದವು? ೯/೧೧ ಗ್ಯಾಲರಿ ಈ ವಿಷಯಕ್ಕೆ ಮೀಸಲು. ಕ್ಯಾಲಿಫೋರ್ನಿಯಾ ಎಕ್ಸಾಮಿನರ್ ಪತ್ರಿಕೆ ಅಂದು ‘ಬಾಸ್ಟರ್ಡ್ಸ್‘ ಎಂಬ ಶೀರ್ಷಿಕೆ ನೀಡಿ ಉಗ್ರರನ್ನು ಬೈದ ಮುಖಪುಟ ನೋಡುಗನ ಗಮನ ಸೆಳೆಯುತ್ತದೆ. ಅಲ್ಲದೇ ಪತನಗೊಳ್ಳುವ ಮೊದಲು ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿದ್ದ ಟೆಲಿಕಾಂ ಗೋಪುರದ ಅವಶೇಷ ಈಗಿಲ್ಲಿ ಪ್ರದರ್ಶನ ವಸ್ತು.

ಪತ್ರಿಕೋದ್ಯಮ ಹೂವ ಮೇಲಿನ ನಡಿಗೆಯಲ್ಲ. ಎಷ್ಟೋ ಪತ್ರಕರ್ತರು ಸುದ್ದಿಗಾಗಿ ಜೀವ ಕೊಟ್ಟಿದ್ದಾರೆ. ಅಂತಹ ಪತ್ರಕರ್ತರಿಗಾಗಿ ಇಲ್ಲಿ ಸ್ಮಾರಕವಿದೆ. ೧೮೦೦ ದಿವಂಗತ ಪತ್ರಕರ್ತರ ಚಿತ್ರವಿದೆ. ಈ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಕಳವಳಕಾರಿಯಾದರೂ ನಿಜ. ಇದೇ ವಿಭಾಗದಲ್ಲಿ ಬಿಳಿಯ ವ್ಯಾನೊಂದಿದೆ. ಇದು ಇರಾಕ್ ಯುದ್ಧದಲ್ಲಿ ವರದಿಗಾರರು ಬಳಸಿದ್ದ ವಾಹನ. ಇದರ ಮೇಲೆಲ್ಲಾ ಬುಲೆಟ್ ಬಡಿದ ಕುರುಹಾಗಿ ಅನೇಕ ರಂಧ್ರಗಳು. ಯುದ್ಧಭೂಮಿಯ ವರದಿಗಾರಿಕೆ ಎಷ್ಟು ಅಪಾಯಕಾರಿ ಎಂಬುದನ್ನಿದು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.

ಗುಟೆನ್‌ಬರ್ಗ್ ನಿರ್ಮಿಸಿದ ಜಗತ್ತಿನ ಮೊಟ್ಟ ಮೊದಲ ಮುದ್ರಣ ಯಂತ್ರದ ಮಾದರಿ, ಆತ ಮುದ್ರಿಸಿದ ಜಗತ್ತಿನ ಮೊಟ್ಟ ಮೊದಲ ಪುಸ್ತಕ ಗುಟೆನ್‌ಬರ್ಗ್ ಬೈಬಲ್‌ನಿಂದ ಹಿಡಿದು... ಸುದ್ದಿ ಸಂಗ್ರಹಕ್ಕೆ ಕೆಎಕ್ಸ್‌ಎಎಸ್ ಟೀವಿ ಬಳಸುತ್ತಿದ್ದ ನೈಜ ಸುದ್ದಿ-ಹೆಲಿಕಾಪ್ಟರ್‌ವರೆಗೆ ಇಲ್ಲಿ ೬೫೦೦ಕ್ಕಿಂತ ಹೆಚ್ಚು ಪ್ರದರ್ಶಕಗಳಿವೆ.



‘ಸ್ವಾತಂತ್ರ್ಯ ದಮನದ’ ದ್ಯೋತಕವಾಗಿದ್ದ ಬರ್ಲಿನ್ ಗೋಡೆಯನ್ನು ೧೯೮೯ರಲ್ಲಿ ಕೆಡವಲಾಯಿತು. ಆದರೆ ಅನೇಕ ವರ್ಣ ಚಿತ್ತಾರದ ಆ ಗೋಡೆ ಹೇಗಿತ್ತು ಗೊತ್ತೇ? ಇಲ್ಲಿ, ಬರ್ಲಿನ್ ಗೋಡೆಯ ಮೂರು ಟನ್ ತೂಕದ ಎಂಟು ವರ್ಣ ರಂಜಿತ ಅವಶೇಷಗಳಿವೆ. ಇವುಗಳನ್ನು ನೋಡಿದರೆ, ಬರ್ಲಿನ್ ಗೋಡೆಯ ವಾಸ್ತವ ತಿಳಿಯುತ್ತದೆ.

ಹೈಟೆಕ್ ಸ್ಟೂಡಿಯೋ


ಇಲ್ಲಿ ಹಳೆಯ ಕಾಲದ ತಗಡು, ವಸ್ತುಗಳು ಮಾತ್ರವಲ್ಲ, ಅತ್ಯಾಧುನಿಕ ಮಾಧ್ಯಮ ತಂತ್ರಜ್ಞಾನದ ಪ್ರದರ್ಶವೂ ಇದೆ. ಸುದ್ದಿಯ ಆಳ ಅರಿವು ನೀಡುವ ೧೨೫ ಗೇಮ್ ಸ್ಟೇಶನ್‌ಗಳು, ಜನಸಾಮಾನ್ಯರಿಗೆ ಟೀವಿ ವರದಿಗಾರರಾಗುವ ಅನುಭವ ನೀಡಲು ಇಂಟರ್ಯಾಕ್ಟಿವ್ ಸ್ಟೂಡಿಯೋಗಳು ಅಲ್ಲದೇ ಐತಿಹಾಸಿಕ ಸುದ್ದಿ ಡಾಕ್ಯುಮೆಂಟರಿಗಳು, ತುಣುಕುಗಳು, ಪತ್ರಿಕೋದ್ಯಮ ಕುರಿತ ಸಿನಿಮಾಗಳು ಇಲ್ಲಿನ ವಿವಿಧ ಥೇಟರ್‌ಗಳಲ್ಲಿ ಪ್ರದರ್ಶನವಾಗುತ್ತಿರುತ್ತವೆ. ಇವುಗಳಲ್ಲಿ ಒಂದು ಥೇಟರಿನ ತೆರೆಯ ಉದ್ದ ಬರೋಬ್ಬರಿ ೧೦೦ ಅಡಿ! ಇನ್ನೊಂದು ಮಾಧ್ಯಮ ತೆರೆಯ ಅಳತೆ ೪೦-೨೨ ಅಡಿ. ಎಬಿಸಿ ಟೀವಿಯ ಒಂದು ಲೈವ್ ಸ್ಟೂಡಿಯೋ ಇಲ್ಲಿದೆ. ಇಲ್ಲಿಂದಲೇ ‘ದಿ ವೀಕ್ ವಿಥ್ ಜಾರ್ಜ್ ಸ್ಟಿಫನೋಪಾಲಸ್’ ಕಾರ್ಯಕ್ರಮ ಪ್ರತಿ ಭಾನುವಾರ ನೇರ ಪ್ರಸಾರವಾಗುತ್ತದೆ.

ನ್ಯೂಸಿಯಂನಲ್ಲೊಂದು ಮನೆಯ ಮಾಡಿ...

ನ್ಯೂಸಿಯಂನ ಇನ್ನೊಂದು ವಿಶೇಷವೆಂದರೆ, ನ್ಯೂಸಿಯಂ ರೆಸಿಡೆಸ್ಸಿ. ಇದು ನ್ಯೂಸಿಯಂ ಕಟ್ಟಡದಲ್ಲೇ ಇರುವ ಅಪಾರ್ಟ್‌ಮೆಂಟು. ಬಾಡಿಗೆ ಹಾಗೂ ಲೀಸ್‌ಗೆ ಸಿಂಗಲ್ ಹಾಗೂ ಡಬಲ್ ಬೆಡ್ ರೂಮ್ ಮನೆಗಳು ಸಾರ್ವಜನಿಕರ ವಾಸಕ್ಕೆ ಲಭ್ಯ. ವಾವ್... ಎಂಥ ಲೊಕೇಶನ್‌ನಲ್ಲಿ ಮನೆ!



ನ್ಯೂಸಿಯಂ ಅಂದರೆ ಬರೀ ಮ್ಯೂಸಿಯಂ ಅಲ್ಲ. ಅಲ್ಲಿ ಸಾರ್ವಜನಿಕರು ಬರ್ತ್‌ಡೇ ಪಾರ್ಟಿ ಮಾಡಲು ಅಥವಾ ತರಬೇತಿ ಕಾರ್ಯಾಗಾರ ಮಾಡಲೂ ಅವಕಾಶವಿದೆ. ಇಲ್ಲಿ, ಸುದ್ದಿ ಹಾಗೂ ಪತ್ರಿಕೋದ್ಯಮ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕ, ಕ್ಯಾಸೆಟ್, ಡೀವಿಡಿ ಹಾಗೂ ಇತರ ಸ್ಮರಣಿಕೆ ಮಾರುವ ಮಳಿಗೆಯೂ ಒಂದಿದೆ. ಅಲ್ಲದೇ, ನ್ಯೂಸಿಯಂ ಆಗಾಗ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಸಾರ್ವಜನಿಕರನ್ನು ಆಕರ್ಷಿಸುತ್ತಿರುತ್ತದೆ. ನ್ಯೂಸಿಯಂ ಪ್ರವೇಶಕ್ಕೆ ೧೮ ಡಾಲರ್ ಶುಲ್ಕ. ನ್ಯೂಸಿಯಂನಂಥ ಬೃಹತ್ ಯೋಜನೆಗೆ ಹಣ ಸಂಗ್ರಹಿಸಲು, ಫ್ರೀಡಂ ಫೋರಂ ಇವುಗಳನ್ನು ಆದಾಯ ಮೂಲವಾಗಿ ಬಳಸಿಕೊಳ್ಳುತ್ತದೆ. ಇಲ್ಲವಾದರೆ, ನ್ಯೂಸಿಯಂನಂಥ ಐರಾವತವನ್ನು ಸರ್ಕಾರಿ ನೆರವಿಲ್ಲದೇ ಸಲಹುವುದು ಹೇಗೆ?
ನ್ಯೂಸಿಯಂ ವೆಬ್ ಸೈಟ್ : http://www.newseum.org

--------------------------

ನ್ಯೂಯಾರ್ಕ್‌ನಲ್ಲೊಂದು ಸೆಕ್ಸ್ ಮ್ಯೂಸಿಯಂ!

ನಾನು ಟೈಮ್ಸ್ ಸ್ವೇರ್‌ನಿಂದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಕಡೆ ಹೊರಟಿದ್ದೆ. ಆಗ ಕಣ್ಣಿಗೆ ಬಿತ್ತು ‘ಮ್ಯೂಸಿಯಂ ಆಫ್ ಸೆಕ್ಸ್‘. ಅರರೆ.. ಹೀಗೂ ಒಂದು ಮ್ಯೂಸಿಯಂ ಇದೆಯಾ ಅಂದುಕೊಂಡೆ. ಮ್ಯೂಸಿಯಂ ಅಮೆರಿಕದ ಸಂಸ್ಕೃತಿಯಲ್ಲೇ ರಕ್ತಗತ. ಎಲ್ಲ ವಿಷಯಕ್ಕೂ ಒಂದೊಂದು ವಸ್ತು ಸಂಗ್ರಹಾಲಯ ಮಾಡಿ ಎಲ್ಲ ದಾಖಲೆಗಳನ್ನೂ ಸಂರಕ್ಷಿಸುವುದು ಅವರ ಜಾಯಮಾನ. ಹಾಗಾಗಿ, ಅಮೆರಿಕದಲ್ಲಿ ಲೆಕ್ಕವಿಲ್ಲದಷ್ಟು ಮ್ಯೂಸಿಯಂ.

ಅಂದಹಾಗೆ, ಸೆಕ್ಸ್ ಮ್ಯೂಸಿಯಂನಲ್ಲಿ ಮನುಷ್ಯ ಮತ್ತು ಪ್ರಾಣಿ ಲೈಂಗಿಕತೆ ಕುರಿತು ಅನೇಕ ಮಾದರಿಗಳು, ಚಿತ್ರಕಲೆ, ಛಾಯಾಚಿತ್ರಗಳು, ಮಾಹಿತಿ ಅಲ್ಲದೇ ಲೈಂಗಿಕ ಆಟಿಕೆಗಳೂ ಇವೆ. ಈ ಮ್ಯೂಸಿಯಂನ ಉದ್ದೇಶ ಲೈಂಗಿಕ ಸದಭಿರುಚಿ ಮೂಡಿಸುವುದು. ಅದರಿಂದ ಚರ್ಚ್ ಸನಿಹವಿದ್ದರೂ ನ್ಯೂಯಾರ್ಕ್‌ನ ಸ್ಥಳೀಯ ಆಡಳಿತ ಈ ಮ್ಯೂಸಿಯಂಗೆ ಪರವಾನಿಗೆ ನೀಡಿದೆ. ಮುಂಬೈನಲ್ಲೂ ಇಂತಹ ಒಂದು ಸೆಕ್ಸ್ ಮ್ಯೂಸಿಯಂ ಇತ್ತೀಚೆಗೆ ಆರಂಭವಾಗಿದೆಯಂತೆ.

Sunday, December 14, 2008

ಸೆಗ್‌ವೇ ಟೂರ್ : ವಂಡರ್ ವಾಹನದ ಮೇಲೆ ನಗರ ಪ್ರದಕ್ಷಿಣೆ


ಭಾಗ - 5

ಪೆಡಲ್ ಇಲ್ಲ. ಕ್ಲಚ್ಚು, ಗೇರು, ಎಕ್ಸಿಲೇಟರ್ ಇಲ್ಲ. ಬ್ರೇಕ್ ಇಲ್ಲ. ತುಳಿಯುವುದು ಬೇಕಿಲ್ಲ. ಪೆಟ್ರೋಲ್ ಬೇಡ. ಸುಮ್ಮನೆ ಸೆಗ್‌ವೇ ಮೇಲೆ ನಿಂತ ಮನುಷ್ಯ ಮುಂದೆ ಬಾಗಿದರೆ ಸೆಗ್‌ವೇ ಮುಂದೆ ಓಡುತ್ತದೆ. ಹಿಂದೆ ಬಾಗಿದರೆ ಹಿಂದೆ ಹೋಗುತ್ತದೆ. ಗಾಡಿ ನಿಲ್ಲಿಸಬೇಕೆ? ಸುಮ್ಮನೆ ಸೆಗ್‌ವೇ ಮೇಲೆ ನೆಟ್ಟಗೆ ನಿಂತರಾಯಿತು!





ರಾವಣನ ಪುಷ್ಪಕ ವಿಮಾನ, ಅಲ್ಲಾವುದ್ದೀನನ ಹಾರುವ ಚಾಪೆ, ಹ್ಯಾರಿ ಪಾಟರ್‌ನ ಹಾರುವ ಕಸಬರಿಗೆ, ಸೂಪರ್ ಮ್ಯಾನ್‌ನ ಹಾರುವ ಉಡುಪು ಹಾಗೂ ವಿಜ್ಞಾನ ಕೌತುಕದ ಹಾರುವ ತಟ್ಟೆ... ಇವೆಲ್ಲಾ ಎಷ್ಟು ಅದ್ಭುತವೋ, ನನಗೆ ಸೆಗ್‌ವೇ ಕೂಡ ಅಷ್ಟೇ ವಂಡರ್‌ಪುಲ್!

ಎರಡೇ ವ್ಯತ್ಯಾಸ. ಒಂದು- ಅವೆಲ್ಲ ಹಾರುತ್ತವೆ. ಸೆಗ್‌ವೇ ನೆಲದ ಮೇಲೆ ಓಡುತ್ತದೆ. ಎರಡು -ಅವೆಲ್ಲ ಬರೀ ಕಲ್ಪನೆ. ಸೆಗ್‌ವೇ ವಾಸ್ತವ!

ಸೆಗ್‌ವೇ ಅಂದರೆ ಎರಡು ಚಕ್ರದ ಪುಟ್ಟ ವಾಹನ. ಆದರೆ, ಜಗತ್ತಿನ ಇನ್ನೆಲ್ಲಾ ವಾಹನಗಳಿಗಿಂತ ಭಿನ್ನ. ಅದಕ್ಕೇ ಎಷ್ಟೋ ದೇಶಗಳು ಇದನ್ನು ಇನ್ನೂ ವಾಹನ ಎಂದು ಪರಿಗಣಿಸಿಯೇ ಇಲ್ಲ! ಆದರೆ, ಇದು ಚಕ್ರದ ಆಧಾರದಲ್ಲಿ ಊರ ತುಂಬಾ ಚಲಿಸುತ್ತದೆಯಲ್ಲ? ಆದ್ದರಿಂದ ಇದು ವಾಹನವಲ್ಲದೇ ಮತ್ತೇನೂ ಅಲ್ಲ.

ಒಬ್ಬ ವ್ಯಕ್ತಿ ನಿಲ್ಲಲು ಸಾಲುವಷ್ಟು ಒಂದು ಮಣೆ. ಅದಕ್ಕೆ ಎರಡು ಚಕ್ರಗಳು. ಮಣೆಯ ಮೇಲೆ ನಿಂತ ಚಾಲಕನಿಗೆ ಹಿಡಿದುಕೊಳ್ಳಲು ಒಂದು ಗೂಟ! ನೋಡಲು ಸೆಗ್‌ವೇ ಅಂದರೆ ಇಷ್ಟೇ.

ಪೆಡಲ್ ಇಲ್ಲ. ಕ್ಲಚ್ಚು, ಗೇರು, ಎಕ್ಸಿಲೇಟರ್ ಇಲ್ಲ. ಬ್ರೇಕ್ ಇಲ್ಲ. ತುಳಿಯುವುದು ಬೇಕಿಲ್ಲ. ಪೆಟ್ರೋಲ್ ಬೇಡ. ಸುಮ್ಮನೆ ಸೆಗ್‌ವೇ ಮೇಲೆ ನಿಂತ ಮನುಷ್ಯ ಮುಂದೆ ಬಾಗಿದರೆ ಸೆಗ್‌ವೇ ಮುಂದೆ ಓಡುತ್ತದೆ. ಹಿಂದೆ ಬಾಗಿದರೆ ಹಿಂದೆ ಹೋಗುತ್ತದೆ. ಕೈಲಿರುವ ಗೂಟವನ್ನು ತುಸು ಬಲಕ್ಕೆ ತಿರುಗಿಸಿದರೆ, ಸೆಗ್‌ವೇ ಬಲಕ್ಕೆ ಹೊರಳುತ್ತದೆ. ಎಡಕ್ಕೆ ತಿರುವಿದರೆ ಎಡಕ್ಕೆ ಹೊರಡುತ್ತದೆ. ಗಾಡಿ ನಿಲ್ಲಿಸಬೇಕೆ? ಸುಮ್ಮನೆ ಸೆಗ್‌ವೇ ಮೇಲೆ ನೆಟ್ಟಗೆ ನಿಂತರಾಯಿತು! ಸೈಕಲ್, ಬೈಕಿನಂತೆ ಬ್ಯಾಲೆನ್ಸ್ ಕೂಡ ಮಾಡಬೇಕಿಲ್ಲ. ತನ್ನ ಮೇಲೆ ನಿಂತ ಚಾಲಕ ಬೀಳದಂತೆ ಈ ವಾಹನದಲ್ಲಿರುವ ಕಂಪ್ಯೂಟರೇ ಎಲ್ಲಾ ಬ್ಯಾಲೆನ್ಸ್ ಮಾಡಿಕೊಳ್ಳುತ್ತದೆ!

ಹೇಳಿ... ಸ್ಟೀರಿಂಗ್ ಇಲ್ಲದ ಹ್ಯಾರಿ ಪಾಟರ್‌ನ ಹಾರುವ ಕಸಬರಿಗೆಗಿಂತ, ಪೆಟ್ರೋಲ್ ಬೇಡದ ಅಲ್ಲಾವುದ್ದೀನನ ಹಾರುವ ಚಾಪೆಗಿಂತ, ಇಂಜಿನ್ ಇಲ್ಲದ ರಾವಣನ ಪುಷ್ಪಕ ವಿಮಾನಕ್ಕಿಂತ ಸೆಗ್‌ವೇ ಏನು ಕಡಿಮೆ ಅದ್ಭುತ!

ನಿಜ ಹೇಳಬೇಕೆಂದರೆ, ಶತಮಾನಗಳ ಹಿಂದೆ ಸೈಕಲ್ ಸಂಶೋಧನೆ ಆದ ನಂತರ ನಡೆದ ಅತಿ ಮಹತ್ವದ ವಾಹನಾನ್ವೇಷಣೆ ಸೆಗ್‌ವೇ -ಎಂದು ತಜ್ಞರು ಇದನ್ನು ಬಣ್ಣಿಸಿದ್ದಾರೆ. ವಿಮಾನ, ರೈಲು, ಹಡಗು, ಬೈಕು, ಕಾರು, ಲಾರಿ, ಬಸ್ಸುಗಳಂತೆ ಸೆಗ್‌ವೇ ಜಗತ್ತಿನ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ಉಂಟುಮಾಡುವುದಿಲ್ಲ. ಚಕ್ಕಡಿಗಾಡಿ, ಕುದುರೆ ಟಾಂಗಾದಂತೆ ಊರಿಂದ ಊರಿಗೆ ಹೋಗಲೂ ಸೆಗ್‌ವೇಯಿಂದ ಸಾಧ್ಯವಿಲ್ಲ. ಆದರೂ, ಸೆಗ್‌ವೇ ೨೦ನೇ ಶತಮಾನದ ಮ್ಯಾಜಿಕ್ ವಾಹನ. ಇಂಥ ಮ್ಯಾಜಿಕ್ ವಾಹನದ ಮೇಲೆ ಅಮೆರಿಕದ ರಾಜಧಾನಿಯನ್ನು ಸುತ್ತುವ ಸಂಭ್ರಮ ನನ್ನದಾಯಿತು.

ನನ್ನ ಸೆಗ್‌ವೇ ಸಂಭ್ರಮ

ಕಳೆದ ಅಕ್ಟೋಬರ್‌ನಲ್ಲಿ ಒಂದು ವಾರ ನಾನು ವಾಷಿಂಗ್‌ಟನ್ ಡಿ.ಸಿ.ಯಲ್ಲಿದ್ದೆ. ವೈಟ್‌ಹೌಸ್‌ನ ಬೇಲಿಯ ಹೊರಗೆ ನಿಂತು ಫೋಟೋ ತೆಗೆಯುತ್ತಿದ್ದೆ. ಹತ್ತು ಜನರ ಒಂದು ತಂಡ ಸುಯ್ಯನೆ ಬಂದು ವೈಟ್ ಹೌಸ್‌ನ ಎದುರು ನಿಂತಿತು. ಅರೇ... ಅವರು ಬಂದಿದ್ದು ಯಾವ ವಾಹನದಲ್ಲಿ ಎಂದು ನೋಡಿದೆ. ಸೆಗ್‌ವೇ!

೨೦೦೧ರಲ್ಲಿ, ಜಗತ್ತಿಗೆ ಸೆಗ್‌ವೇ ಅನಾವರಣಗೊಂಡಾಗ, ಅದರ ಬಗ್ಗೆ ನಾನು ಇದೇ ಪತ್ರಿಕೆಯಲ್ಲಿ ಚಿಕ್ಕ ಬರಹ ಬರೆದಿದ್ದೆ. ಆನಂತರ, ಅದನ್ನು ನೆನಪಿಸಿಕೊಳ್ಳುವ ಅಥವಾ ನೋಡುವ ಅವಕಾಶವೇ ಬಂದಿರಲಿಲ್ಲ. ಆದರೀಗ, ನನ್ನ ಕಣ್ಣ ಮುಂದೆ ದಿಢೀರನೆ ಸೆಗ್‌ವೇ ಪ್ರತ್ಯಕ್ಷವಾಗಿತ್ತು. ನನಗಾಗ, ಮಕ್ಕಳಿಗೆ ಹೊಸ ಆಟಿಕೆ ಕಂಡಾಗ ಆಗುವಷ್ಟು ಸಂಭ್ರಮವಾದದ್ದು ಸುಳ್ಳಲ್ಲ.

ವಾಷಿಂಗ್ಟನ್ ಡಿಸಿ, ಶಿಕಾಗೋ, ಸ್ಯಾನ್‌ಪ್ರಾನ್ಸಿಸ್ಕೋ ಸೇರಿದಂತೆ ಅಮೆರಿಕದ ಕೆಲವು ನಗರಗಳಲ್ಲಿ ‘ಸಿಟಿ ಸೆಗ್‌ವೇ ಟೂರ್’ ಪ್ರವಾಸೀ ಸೌಕರ್ಯವಿದೆ. ಸುಮಾರು ೩ ಗಂಟೆಯ ಕಾಲ ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಸೆಗ್‌ವೇಯಲ್ಲಿ ಪ್ರವಾಸ ಕರೆದುಕೊಂಡು ಹೋಗುವ ಸಿಟಿ ಟೂರ್ ಪ್ಯಾಕೇಜ್ ಇದು. ಒಂದು ಸೆಗ್‌ವೇಯಲ್ಲಿ ಒಬ್ಬ ಟೂರ್ ಗೈಡ್ ಇರುತ್ತಾಳೆ. ಆ ಗೈಡನ್ನು ೮ರಿಂದ ೧೦ ಜನ ಪ್ರವಾಸಿಗಳು ಒಂದೊಂದು ಸೆಗ್‌ವೇಯಲ್ಲಿ ಹಿಂಬಾಲಿಸುತ್ತಾರೆ. ಪ್ರೇಕ್ಷಣೀಯ ಸ್ಥಳ ಬಂದಾಗ ಗೈಡ್ ಸೆಗ್‌ವೇ ನಿಲ್ಲಿಸಿ ಮಾಹಿತಿ ನೀಡುತ್ತಾಳೆ. ಅದಾದ ಬಳಿಕ ಈ ಸೆಗ್‌ವೇ ತಂಡ ಮುಂದಿನ ಪ್ರೇಕ್ಷಣೀಯ ಸ್ಥಳಕ್ಕೆ ಹೊರಡುತ್ತದೆ. ಈ ಮೂರು ಗಂಟೆಯ ಪ್ರವಾಸಕ್ಕೆ ೭೦ ಡಾಲರ್! ಸಾಮಾನ್ಯವಾಗಿ ಪ್ರತಿದಿನವೂ ಸೆಗ್‌ವೇ ಟೂರ್ ಪೂರ್ಣ ಬುಕ್ ಆಗಿರುತ್ತದೆ. ಆದ್ದರಿಂದ ತುಸು ಮುಂಗಡವಾಗಿ ಪ್ರವಾಸ ಬುಕ್ ಮಾಡಿಕೊಳ್ಳುವುದು ಒಳಿತು.

ಟೂರ್ ಆರಂಭಿಸುವ ಮೊದಲು, ಸೆಗ್‌ವೇ ಚಾಲನೆ ಮಾಡುವುದು ಹೇಗೆ ಎಂದು ಆರೇಳು ನಿಮಿಷ ಪ್ರಾತ್ಯಕ್ಷಿಕೆ ನೀಡುತ್ತಾರೆ. ಆಮೇಲೆ ಹತ್ತಿಪ್ಪತ್ತು ನಿಮಿಷ ಪ್ರವಾಸಿಗರಿಂದ ಸೆಗ್‌ವೇ ಚಾಲನೆಯ ತಾಲೀಮು ಮಾಡಿಸುತ್ತಾರೆ. ಅಷ್ಟು ಬೇಗ ಸೆಗ್‌ವೇ ಚಾಲನೆ ಕಲಿಯಬಹುದೇ ಎಂಬ ಸಂಶಯ ನನಗೂ ಇತ್ತು. ಆದರೆ, ನನಗೆ ಕೇವಲ ಐದು ನಿಮಿಷದಲ್ಲಿ ಸೆಗ್‌ವೇ ಮೇಲೆ ಹಿಡಿತ ಸಿಕ್ಕಿತು. ಅಂದರೆ, ಊಹಿಸಿ. ಸೆಗ್‌ವೇ ಚಾಲನೆ ಎಷ್ಟು ಸಲೀಸು ಎಂದು. ನಾನು ಚಿಕ್ಕವನಿರುವಾಗ ಅಪ್ಪ ನನಗೆ ಸೈಕಲ್ ಕಲಿಸಲು ವಾರಗಟ್ಟಲೆ ಕಷ್ಟಪಟ್ಟಿದ್ದನ್ನು, ಕಲಿತ ಹೊಸತರಲ್ಲಿ ನಾನು ಬಿದ್ದು ಗಾಯ ಮಾಡಿಕೊಂಡಿದ್ದನ್ನು ನೆನಪಿಸಿಕೊಂಡು ಮನಸ್ಸಿನಲ್ಲೇ ನಕ್ಕೆ.

ಆಟೋಮ್ಯಾಟಿಕ್ ಬ್ಯಾಲೆನ್ಸ್

ಸೆಗ್‌ವೇ ಮೇಲೆ ನಿಂತುಕೊಳ್ಳುವುದು ಸರ್ಕಸ್ ಅಲ್ಲವೇ ಅಲ್ಲ. ಸೆಗ್‌ವೇಯಲ್ಲಿ ಗೈರೋಸ್ಕೋಪ್, ಮೋಟರ್ ಮುಂತಾದ ಯಾಂತ್ರಿಕ ಭಾಗಗಳಿವೆ. ಆದರೆ ಅವೆಲ್ಲ ಹೊರಗಡೆಯಿಂದ ಕಾಣಲ್ಲ ಬಿಡಿ. ಸೆಗ್‌ವೇಯ ಮಣೆಯಲ್ಲಿ ಒಂದು ಕಂಪ್ಯೂಟರ್ ಇರುತ್ತದೆ. ಇದು ಸೆಗ್‌ವೇಯ ಸಮತೋಲನವನ್ನು ಸದಾ ಕಾಯ್ದುಕೊಳ್ಳುತ್ತದೆ. ಸೆಗ್‌ವೇ ಮೇಲೆ ನಿಂತ ವ್ಯಕ್ತಿಯ ಬ್ಯಾಲೆನ್ಸನ್ನೂ ಸೆಗ್‌ವೇ ಕಂಪ್ಯೂಟರೇ ಗಮನಿಸುತ್ತಿರುತ್ತದೆ. ವ್ಯಕ್ತಿ ಮುಂದೆ ಬಾಗಿದಾಗ ಸೆಗ್‌ವೇಯ ಗುರುತ್ವ (ಸೆಂಟರ್ ಆಫ್ ಗ್ರಾವಿಟಿ) ಮುಂದಕ್ಕೆ ಚಲಿಸುತ್ತದೆ. ಆಗ, ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸೆಗ್‌ವೇ ಕೂಡ ಮುಂದೆ ಚಲಿಸುತ್ತದೆ. ವ್ಯಕ್ತಿ ಮುಂದೆ ಬಾಗಿದಷ್ಟೂ ವೇಗ ಹೆಚ್ಚುತ್ತದೆ. ಅದೇ ರೀತಿ ಬಾಡಿ ಹಿಂದೆ ಬಾಗಿದರೆ ಗಾಡಿ ರಿವರ್‍ಸ್ ಚಲಿಸುತ್ತದೆ.

ಇದರ ಗರಿಷ್ಠ ವೇಗ ಗಂಟೆಗೆ ೨೦ ಕಿಮೀ. ಇದು ರೀಚಾರ್ಜೆಬಲ್ ಬ್ಯಾಟರಿ ಚಾಲಿತ, ಮಾಲಿನ್ಯ ರಹಿತ ವಾಹನ. ಇದರ ತೂಕ ಸುಮಾರು ೪೫ ಕೆಜಿ. ಇದರ ಮೇಲೆ ಸುಮಾರು ೧೦೦ ಕೆಜಿ ಭಾರದ ವ್ಯಕ್ತಿ ನಿಲ್ಲಬಹುದು. ಒಮ್ಮೆ ಚಾರ್ಜ್ ಮಾಡಿದರೆ, ೨೦-೨೫ ಕಿ.ಮೀ. ದೂರ ಕ್ರಮಿಸಬಹುದು. ಆದ್ದರಿಂದ, ಇದು ನಗರದ ಒಳಗೆ ಸಂಚರಿಸಲು ಮಾತ್ರ ಯೋಗ್ಯ.

‘ಸಿಟಿ ಟೂರ್’ ಕಂಪನಿಗಳ ಹೊರತಾಗಿ ಪೊಲೀಸರು, ಮುನಿಸಿಪಾಲಿಟಿ ಸಿಬ್ಬಂದಿ, ಪೋಸ್ಟ್‌ಮನ್ ಮುಂತಾದವರೂ ಇದನ್ನು ತಮ್ಮ ವಾಹನವಾಗಿ ಬಳಸುತ್ತಿದ್ದಾರೆ. ಕಾರ್ಪೋರೇಟ್ ಕ್ಯಾಂಪಸ್‌ಗಳಲ್ಲಿ, ವಾಲ್‌ಮಾರ್ಟ್‌ನಂಥ ದೊಡ್ಡ ಮಳಿಗೆಗಳಲ್ಲಿ, ವಿಮಾನ ನಿಲ್ದಾಣಗಳಲ್ಲೂ ಸೆಗ್‌ವೇಯನ್ನು ಕಾಣಬಹುದು. ಈಗೀಗ ಸೆಗ್‌ವೇ ಪೋಲೋ ಪಂದ್ಯವೂ ಆರಂಭವಾಗಿದೆ. ರೋಮ್, ಲಂಡನ್, ಫ್ರಾನ್ಸ್‌ನಂಥ ನಗರಗಳಲ್ಲೂ ಸೆಗ್ ಟೂರ್ ಇವೆಯಂತೆ. ಆದರೆ, ಭಾರತದಲ್ಲಿ ಎಲ್ಲೂ ಸೆಗ್‌ವೇ ಟೂರ್ ಇರುವ ಬಗ್ಗೆ ಮಾಹಿತಿಯಿಲ್ಲ.
ಟಿ ೩ ಲಕ್ಷ ರೂ ಬೆಲೆ: ಸೆಗ್‌ವೇಯಂಥ ಸರಳ, ಉಪಯುಕ್ತ ವಾಹನ ಏಕೆ ಇನ್ನೂ ಪ್ರಸಿದ್ಧವಾಗಿಲ್ಲ? ೨೦೦೧ರಲ್ಲಿ ಸೆಗ್‌ವೇ ಮೊಟ್ಟ ಮೊದಲು ಅನಾವರಣಗೊಂಡಾಗ ಇದು ಸಾರಿಗೆ ಕ್ರಾಂತಿ ಮಾಡುತ್ತದೆ ಎಂದೇ ಬಿಂಬಿಸಲಾಗಿತ್ತು. ಇನ್ನೂ ಈ ಪರ್ಸನಲ್ ಟ್ರಾನ್ಸ್ ಪೋರ್ಟರ್ ‘ಆಟಿಕೆ’ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಜಗತ್ತಿನಾದ್ಯಂತ ಇದು ಸೈಕಲ್‌ನಂತೆ ಜನಪ್ರಿಯವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಹಾಗಾಗಲಿಲ್ಲ. ಏಕೆಂದರೆ, ಇದರ ಬೆಲೆ ದುಬಾರಿ. ಅಮೆರಿಕದಲ್ಲಿ ಸುಮಾರು ೫-೬ ಸಾವಿರ ಡಾಲರ್. ಅಂದರೆ, ಭಾರತೀಯ ಲೆಕ್ಕದಲ್ಲಿ ಕನಿಷ್ಠ ೩ ಲಕ್ಷ ರುಪಾಯಿ. ಈ ಬೆಲೆಗೆ ಒಂದು ಕಾರು ಅಥವಾ ಬೈಕೇ ಸಿಗುತ್ತದೆ. ಅದರಿಂದಾಗಿ ಸೆಗ್‌ವೇ ಇನ್ನೂ ವೈಯಕ್ತಿಕ ವಾಹನವಾಗಿ ಬಳಕೆಗೆ ಬಂದಿಲ್ಲ.

ನಾನು ಸೆಗ್‌ವೇ ಸವಾರಿ ಮಾಡಿದ್ದು ಕೇವಲ ಮೂರು ಗಂಟೆ ಕಾಲ. ಆದರೆ, ಆ ಸೆಗ್‌ವೇ ಮೇಲೆ ವಾಷಿಂಗ್‌ಟನ್ ಡಿ.ಸಿ. ನೋಡಿದ ನೆನಪು ಚಿರಕಾಲ. ಅಮೆರಿಕದ ನಗರಗಳನ್ನು ನೋಡಲು ಅನೇಕ ಹವಾನಿಯಂತ್ರಿತ ಪ್ರವಾಸಿ ಬಸ್ಸುಗಳು, ರೂಫ್‌ಟಾಪ್ ವಾಹನಗಳೂ, ಸುಖಾಸೀನದ ಲಿಮೋಸಿನ್‌ಗಳೂ, ಪ್ರತಿಷ್ಠಿತ ಕಾರುಗಳೂ ಇವೆ. ಆದರೆ, ಸೆಗ್‌ವೇ ಟೂರ್ ಅನುಭವದ ಮುಂದೆ ಉಳಿದೆಲ್ಲ ವಾಹನಗಳ ನಗರ ಪ್ರವಾಸವೂ ತೀರಾ ಸಪ್ಪೆ.


---------------------------

ಮೈಸೂರು, ಹಂಪಿಗೆ ಬಂದ್ರೆ ಹಿಟ್

ಸೆಗ್‌ವೇ ಟೂರ್ ಭಾರತದಲ್ಲಿ ಎಲ್ಲೂ ಇರುವ ಬಗ್ಗೆ ಮಾಹಿತಿಯಿಲ್ಲ. ಬೆಂಗಳೂರು, ದೆಹಲಿ, ಕೊಲ್ಕತಾದ ದಟ್ಟ ಟ್ರಾಫಿಕ್‌ನಗರಿಗಿಂತ ಗೋವಾ, ಹಂಪಿ, ಮೈಸೂರಿನಂಥ ಊರಿನಲ್ಲಿ ‘ಸೆಗ್‌ವೇ ಸಿಟಿ ಸವಾರಿ’ ಹಿಟ್ ಆಗಬಹುದು.
- ಭಾರತದ ಸೆಗ್‌ವೇ ವಾಹನದ ಅಧಿಕೃತ ಡೀಲರ್
ಸ್ಟಾರ್ ಪರ್ಸನಲ್ ಟ್ರಾನ್ಸ್ ಪೋರ್ಟ್ ಪ್ರೈ. ಲಿ,
ನಂ.೨೮, ಫ್ರೆಂಡ್ಸ್ ಕಾಲೋನಿ (ವೆಸ್ಟ್),
ನವದೆಹಲಿ, ೧೧೦೦೬೫.

-ಸೆಗ್‌ವೇ ವೆಬ್‌ಸೈಟ್: http://www.segway.com

Sunday, December 7, 2008

2009 - ಫಿದಾಯೀ ಭಯೋತ್ಪಾದನಾ ವರ್ಷ?

ನ್ಯೂಯಾರ್ಕ್ ಸಬ್ ವೇ ಉಗ್ರರ ಮುಂದಿನ ಟಾರ್ಗೆಟ್


ಭಾಗ - 4

ಅಮೆರಿಕಕ್ಕೆ ಈಗ ಹೊಸ ನಮೂನಿ ಭಯೋತ್ಪಾದನಾ ಸಮಸ್ಯೆ ಎದುರಾಗಿದೆ. ಅದು Home Grown Terrorism ಸಮಸ್ಯೆ. ನ್ಯೂಯಾರ್ಕಿನ ’ಫಾರಿನ್ ಪಾಲಿಸಿ ಅಸೋಸಿಯೇಶನ್’ ಬಾತ್ಮೀದಾರ ಹಾಗೂ ’ಟೆರರಿಸಂ ತಜ್ಞ’ ಜೋಶ್ ಹ್ಯಾಮರ್ ಪ್ರಕಾರ ೯/೧೧ ಮಾದರಿ ಕೃತ್ಯಗಳಿಗಿಂತ ಇನ್ನು ’ಫಿದಾಯೀ’ ಮಾದರೀ ಭಯೋತ್ಪಾದನಾ ಪ್ರಕರಣಗಳು ಹೆಚ್ಚಲಿವೆ. ೨೦೦೯ ಬಹುಶಃ ಫಿದಾಯೀ ಮಾದರಿ ಭಯೋತ್ಪಾದನೆಯ ವರ್ಷವಾದರೂ ಆಗಬಹುದು.






ಳೆದ ಅಕ್ಟೋಬರ್ ಕೊನೆಯ ವಾರ ನಾನು ನ್ಯೂಯಾರ್ಕ್ ಸಿಟಿಯಲ್ಲಿದ್ದೆ. ಉಳಿದ ಅಮೆರಿಕದ ಶಹರಗಳಂತಲ್ಲ ಇದು. ಸದಾ ಜನ ಗಿಜಿಬಿಜಿ. ಗಡಿಬಿಡಿ. ಟ್ರಾಫಿಕ್ ಸಿಗ್ನಲ್‌ಗೆ ಕವಡೆ ಕಿಮ್ಮತ್ತು. ಯಾಕೋ ಮುಂಬೈನಲ್ಲಿರುವಂತೇ ಅನಿಸಿತು. ಅಮೆರಿಕದ ಅತ್ಯಂತ ಜನನಿಬಿಡ ಶಹರ ಇದು.

ಅಮೆರಿಕದ ಅಧ್ಯಕ್ಷ ಹುದ್ದೆಯನ್ನು ಬಿಟ್ಟರೆ, ನ್ಯೂಯಾರ್ಕ್ ಸಿಟಿಯ ಮೇಯರ್ ಹುದ್ದೆಯೇ ಅತ್ಯಂತ ಕಷ್ಟದ ಪದವಿ! - ಎನ್ನೋ ಮಾತಿದೆ. ಈ ಸಿಟಿಯ ನಿರ್ವಹಣೆ, ಭದ್ರತೆ ಅಷ್ಟು ಕಷ್ಟ.

ಅಲ್ಲಿ ನೆಲದಡಿ ಹಲವು ಸುರಂಗ ರೇಲ್ವೇಗಳಿವೆ. ಈ ಮೆಟ್ರೋ ರೇಲ್ವೆ ವ್ಯವಸ್ಥೆಗೆ ಸಬ್‌ವೇ ಅಂತ ಹೆಸರು. ಈ ಸಬ್‌ವೇಗಳಲ್ಲಿ 'ಟೈಮ್ಸ್ ಸ್ಕ್ವೇರ್ ಟರ್ಮಿನಲ್ ' ಅಮೆರಿಕದ ಅತ್ಯಂತ ಬಿಝಿ ರೇಲ್ವೆ ನಿಲ್ದಾಣ. ನಾನಿದ್ದ ಹೊಟೆಲ್, ಟೈಮ್ಸ್ ಸ್ಕ್ವೇರ್‌ನಿಂದ ಕೇವಲ ೨ ನಿಮಿಷದ ನಡಿಗೆ. ಹಾಗಾಗಿ, ಆರೆಂಟು ಸಲ ಈ ನಿಲ್ದಾಣಕ್ಕೆ ಹೋಗಿದ್ದೆ.

ನೆಲದಡಿ ಇರುವ ನಾಲ್ಕು ಮಹಡಿಗಳ ಈ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ, ಕಿವಿಗಡಚಿಕ್ಕುವ ಸಂಗೀತ ಕೇಳಿಸಲು ಆರಂಭಿಸುತ್ತದೆ. ಗಿಟಾರ್ ನುಡಿಸುವವರು, ಡ್ರಮ್ ಬಾರಿಸುವವರು, ಟೇಪ್ ರೆಕಾರ್ಡ್‌ರ್ ಹಾಕಿಕೊಂಡು ಡಾನ್ಸ್ ಮಾಡುವವರು, ಹಲವು ವಾದ್ಯಗಳ ಆರ್‍ಕೆಸ್ಟ್ರಾ ನಡೆಸುವವರು... ಹೀಗೆ ಬಹುರೂಪಿ ಕಲಾವಿದರು ಮತ್ತು ಭಿಕ್ಷುಕರು ರೇಲ್ವೆ ಸ್ಟೇಷನ್‌ನ ಪ್ರವಾಸೀ ಆಕರ್ಷಣೆ. ಪೀಕ್ ಅವರ್‌ನಲ್ಲಿ ಇಲ್ಲಿ ಕಾಲಿಡಲೂ ಆಗದಷ್ಟು ಜನಸಂದಣಿ.

ಈ ಸ್ಟೇಷನ್ ಪ್ರವೇಶಿಸಿದಾಗೆಲ್ಲ ನನಗೆ ಅನಿಸಿದ್ದಿದೆ. ’ಇದೇನಿದು, ಇಲ್ಲಿ ಸ್ವಲ್ಪವೂ ಭದ್ರತಾ ವ್ಯವಸ್ಥೆಯೇ ಕಾಣುವುದಿಲ್ಲವಲ್ಲ. ಎಲ್ಲಾ ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ, ನಿಜ. ಆದರೆ, ಇಷ್ಟು ಬಿಝಿ ನಿಲ್ದಾಣಕ್ಕೆ ಇಷ್ಟೇ ಸಾಕೆ ಭದ್ರತೆ? ಒಂದು ವೇಳೆ ಇಲ್ಲಿ ಉಗ್ರರು ದಾಳಿ ಮಾಡಿದರೆ ಏನು ಗತಿ!’

ಸುಮ್ಮನೆ ಕೆಟ್ಟ ಕಲ್ಪನೆಯೊಂದು ಬಂತು -"ಐದಾರು ಜನ ಉಗ್ರರ ತಂಡ... ಸಾಧಾರಣ ಮೆಷಿನ್ ಗನ್ ಹಿಡಿದು ಏಕಾಏಕಿ ದಾಳಿಮಾಡಿ... ೧೦ ನಿಮಿಷದಲ್ಲಿ ನೂರಿನ್ನೂರು ಜನರನ್ನು ಕೊಂದು... ರೈಲೊಂದನ್ನು ಹೈಜಾಕ್ ಮಾಡಿ... ಕಡಿಮೆ ಜನಸಂದಣಿಯ ಸಣ್ಣ ಸ್ಟೇಷನ್‌ಗೆ ಹೋಗಿಳಿದು... ಪರಾರಿಯಾಗುವುದು ಎಷ್ಟು ಸುಲಭ!"

ಅಮೆರಿಕದ ವಿಮಾನ ನಿಲ್ದಾಣದಲ್ಲಾದರೋ, ಜಗತ್ತಿನಲ್ಲಿ ಎಲ್ಲೂ ಇಲ್ಲದಷ್ಟು ಬಿಗಿ ಭದ್ರತೆ. ತಪಾಸಣೆಗಾಗಿ ಬೆಲ್ಟು, ಶೂಗಳನ್ನೂ ಬಿಚ್ಚಿ ಎಕ್ಸ್‌ರೇ ಮಷಿನ್ನಿನೊಳಗೆ ತೂರಿಸಬೇಕು. ಆದರೆ, ಸಬ್‌ವೇಯಂಥ ಜನನಿಬಿಡ ಪ್ರದೇಶದಲ್ಲಿ ಮಾತ್ರ ಯಾವ ಭದ್ರತೆಯೂ ಇಲ್ಲ. ತಪಾಸಣೆಯಂತೂ ಇಲ್ಲವೇ ಇಲ್ಲ.

... ಇಂಥ 'ನ್ಯೂಯಾರ್ಕ್ ಸಬ್‌ವೇ' ಉಗ್ರರ ಮುಂದಿನ ಗುರಿ ಎಂದು ಕಳೆದ ವಾರ ಅಮೆರಿಕದ ರಾಷ್ಟ್ರೀಯ ತನಿಖಾ ದಳ - ಎಫ್‌ಬಿಐ ಎಚ್ಚರಿಕೆ ನೀಡಿದೆ.

ಹಾಗಾದರೆ, ನ್ಯೂಯಾರ್ಕ್ ಸಬ್‌ವೇ ಮೇಲೆ ನಡೆಯುವ ಭಯೋತ್ಪಾದನಾ ದಾಳಿ ಹೇಗಿರುತ್ತದೆ? ವಿಮಾನ ಡಿಕ್ಕಿ ಹೊಡೆಸುವಂಥ, ೯/೧೧, ಅಲ್‌ಖೈದಾ ಮಾದರಿಯ ಅದ್ಧೂರಿ ಭಯೋತ್ಪಾದನೆಯೋ? ಅಥವಾ ಮುಂಬೈಯಲ್ಲಿ ಕಳೆದವಾರ ನಡೆದಂಥ ಲಷ್ಕರ್-ಎ-ತಯ್ಯಬಾದ ’ಫಿದಾಯೀ’ ಮಾದರಿ ’ಚೀಪ್ ಆಂಡ್ ಬೆಸ್ಟ್’ ಭಯೋತ್ಪಾದನೆಯೋ?

ನ್ಯೂಯಾರ್ಕಿನ ’ಫಾರಿನ್ ಪಾಲಿಸಿ ಅಸೋಸಿಯೇಶನ್’ ಬಾತ್ಮೀದಾರ ಹಾಗೂ ’ಟೆರರಿಸಂ ತಜ್ಞ’ ಜೋಶ್ ಹ್ಯಾಮರ್ ಪ್ರಕಾರ ೯/೧೧ ಮಾದರಿ ಕೃತ್ಯಗಳಿಗಿಂತ ಇನ್ನು ’ಫಿದಾಯೀ’ ಮಾದರೀ ಭಯೋತ್ಪಾದನಾ ಪ್ರಕರಣಗಳು ಹೆಚ್ಚಲಿವೆ. ೨೦೦೯ ಬಹುಶಃ ಫಿದಾಯೀ ಮಾದರಿ ಭಯೋತ್ಪಾದನೆಯ ವರ್‍ಷವಾದರೂ ಆಗಬಹುದು ಎನ್ನುತ್ತಾರೆ ಅವರು!

ಯಾಕೆಂದರೆ, ಫಿದಾಯೀ ಮಾದರಿ ಭಯೋತ್ಪಾದನೆ ಸರಳ, ಸೋವಿ ಮತ್ತು ಅತ್ಯಂತ ಪ್ರಭಾವೀ ಎನ್ನುತ್ತಾರೆ ಜೋಶ್ ಹ್ಯಾಮರ್.
ಫಿದಾಯೀ ದಾಳಿ ಅಂದರೆ ಆತ್ಮಹತ್ಯಾ ದಾಳಿಯಲ್ಲ. ಉಗ್ರರ ಒಂದು ತಂಡ ಯಾವುದೋ ಒಂದು ಕಟ್ಟಡ, ಕಚೇರಿ ಅಥವಾ ಹೆಗ್ಗುರುತಿನ ಮೇಲೆ ಏಕಾ ಏಕಿ ಬಂದೂಕು ಮತ್ತು ಗ್ರೆನೇಡಿನ ದಾಳಿ ಮಾಡಿ ಅದನ್ನು ಆಕ್ರಮಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿರುವ ಜನರನ್ನು ಒತ್ತೆ ಇಟ್ಟುಕೊಳ್ಳುತ್ತದೆ. ಎಷ್ಟು ದೀರ್ಘ ಕಾಲ ದಾಳಿ ನಡೆಸಲು ಸಾಧ್ಯವೋ ಅಷ್ಟು ನಡೆಸಿ, ತಮ್ಮ ವಿಧ್ವಂಸಕ ಕೃತ್ಯಕ್ಕೆ ಹೆಚ್ಚು ಪ್ರಚಾರ ಸಿಗುವಂತೆ ಮಾಡುತ್ತದೆ. ತಮ್ಮಲ್ಲಿರುವ ಮದ್ದು ಗುಂಡು ಖಾಲಿಯಾಗುವವರೆಗೂ ದಾಳಿ ನಡೆಸುತ್ತದೆ. ನಂತರ, ಅವಕಾಶ ಸಿಕ್ಕರೆ ಆ ಉಗ್ರರ ತಂಡ ಸ್ಥಳದಿಂದ ಪಲಾಯನಗೈಯುತ್ತದೆ ಅಥವಾ ಭದ್ರತಾ ಸಿಬ್ಬಂದಿಯಿಂದ ಹತಗೊಳ್ಳುತ್ತದೆ. ಲಷ್ಕರ್-ಎ-ತಯ್ಯಬಾ ಸಂಘಟನೆಯ ಭಯೋತ್ಪಾದನಾ ಮಾದರಿ ಇದು.


ಬರುವ ದಿನಗಳಲ್ಲಿ ಫಿದಾಯೀ ಮಾದರಿ ಭಯೋತ್ಪಾದನೆ ಯಾಕೆ ಹೆಚ್ಚಾಗಬಹುದು ಎನ್ನಲು ಜೋಶ್ ಹ್ಯಾಮರ್ ಐದು ಕಾರಣಗಳನ್ನು ನೀಡುತ್ತಾರೆ.

ಉಗ್ರರ ನೇಮಕ ಸುಲಭ : ಆತ್ಮಹತ್ಯಾ ದಾಳಿಗೆ ಉಗ್ರರನ್ನು ನೇಮಕ ಮಾಡಿಕೊಳ್ಳಲು ಉಗ್ರ ಸಂಘಟನೆಗಳಿಗೆ ಕಷ್ಟವಾಗುತ್ತಿದೆ. ಏಕೆಂದರೆ, ಆತ್ಮಹತ್ಯಾ ದಾಳಿಯಲ್ಲಿ ಬಾಂಬರ್ ಸ್ಫೋಟಗೊಂಡು ಛಿದ್ರವಾಗುವುದು ಖಚಿತ. ಆದರೆ, ಫಿದಾಯೀ ದಾಳಿಯಲ್ಲಿ ಉಗ್ರನಿಗೆ ಬದುಕುಳಿಯುವ ಅವಕಾಶವಿದೆ. ಹಾಗಾಗಿ, ಫಿದಾಯೀಗಳಾಗಲು ಉಗ್ರರು ಬೇಗನೆ ಒಪ್ಪಿಕೊಳ್ಳುತ್ತಿದ್ದಾರೆ.

ಕಡಿಮೆ ಖರ್ಚು, ಹೆಚ್ಚು ಹಾನಿ : ೯/೧೧ ದಾಳಿ ಮಾಡಲು ಅಲ್‌ಖೈದಾ ಪ್ರತಿ ವಿಮಾನ ಅಪಹರಣಕಾರರಿಗೆ ೨೬೦೦೦ ಡಾಲರ್ (೧೩ ಲಕ್ಷ ರು.) ನೀಡಿತ್ತಂತೆ. ಆದರೆ, ಫಿದಾಯಿ ಉಗ್ರರಿಗೆ ತಲಾ ೨೦೦೦ ಡಾಲರ್ (೧ ಲಕ್ಷ ರು.) ಸಾಕು. ಈ ಹಿನ್ನೆಲೆಯಲ್ಲಿ, ಫಿದಾಯೀ ಭಯೋತ್ಪಾದನೆ ಅತ್ಯಂತ ಸೋವಿ. ಒಂದಷ್ಟು ಉಗ್ರರು, ಅವರಿಗೆ ಒಂದೊಂದು ಎಕೆ-೪೭, ಒಂದಷ್ಟು ಗ್ರೆನೇಡ್, ಒಂದಷ್ಟು ಆರ್‌ಡಿಎಕ್ಸ್, ಖರ್ಚಿಗೆ ಒಂದಷ್ಟು ದುಡ್ಡು... ಸೋ ಚೀಪ್! ಆದರೆ, ಈ ದಾಳಿಯಿಂದಾಗುವ ಹಾನಿ ಅಪಾರ. ಉದಾಹರಣೆಗೆ ಕಳೆದ ವಾರದ ಮುಂಬೈ ಪ್ರಕರಣವನ್ನೇ ನೋಡಿ. ಕೇವಲ ೧೦ ಉಗ್ರರು ೨೦೦ ಜನರನ್ನು ಕೊಲ್ಲುವುದರ ಜೊತೆಗೆ ಉಂಟು ಮಾಡಿದ ಆರ್‍ಥಿಕ ನಷ್ಟ ಕನಿಷ್ಠ ೫೦೦೦ ಕೋಟಿಗೂ ಅಧಿಕ! ಹತ್ತಾರು ಬಾಂಬ್ ಸಿಡಿಸಿದ್ದರೂ ಇಷ್ಟೊಂದು ಹಾನಿ ಸಂಭವಿಸುತ್ತಿರಲಿಲ್ಲ.

ಸುಲಭ ಲಭ್ಯ ಆಯುಧ : ಫಿದಾಯೀ ದಾಳಿಗೆ ಬೇಕಾದ ಬಂದೂಕು, ಗ್ರೆನೇಡ್‌ನಂಥ ಆಯುಧಗಳು ಸುಲಭಕ್ಕೆ ಸಿಗುತ್ತವೆ. ಅಮೆರಿಕದಂಥ ಕೆಲವು ದೇಶಗಳಲ್ಲಂತೂ ಬಂದೂಕು ಕೊಳ್ಳುವುದು ಕಷ್ಟವೇ ಅಲ್ಲ. ಅವುಗಳ ಸಾಗಾಟ ಕೂಡ ಸುಲಭ. ೯/೧೧ನಂಥ ದಾಳಿಗೆ ವಿಮಾನಗಳಂಥ ದೊಡ್ಡ ಸಾಧನಗಳು ಬೇಕು. ಅವುಗಳ ಸಂಪಾದನೆ ಕಷ್ಟ.

ವಿಫಲಗೊಳ್ಳುವ ಸಾಧ್ಯತೆ ಕಡಮೆ : ೯/೧೧ ಮಾದರಿ ದಾಳಿಯಲ್ಲಿ ಅತ್ಯಂತ ಕೂಲಂಕಷ ಯೋಜನೆ ಬೇಕಾಗುತ್ತದೆ. ಯೋಜನೆಯಲ್ಲಿ ಯಾರು ಸ್ವಲ್ಪ ಏಮಾರಿದರೂ ಇಡೀ ಯೋಜನೆ ವಿಫಲವಾಗುತ್ತದೆ. ಆದರೆ, ಫಿದಾಯೀ ದಾಳಿ ವಿಫಲಗೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ. ಅಲ್ಲದೇ, ಸಮಯಕ್ಕೆ ತಕ್ಕಂತೆ ಫಿದಾಯೀ ಉಗ್ರರು ತಮ್ಮ ಯೋಜನೆಗಳನ್ನು ಬದಲಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಬಹುದು.

೫. ದೀರ್ಘ ಹಾಗೂ ಅತಿ ಪರಿಣಾಮಕಾರಿ : ೯/೧೧ ಘಟನೆಯಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದು ಅವಳಿ ಕಟ್ಟಡಗಳನ್ನು ಉರುಳಿಸಲು ತೆಗೆದುಕೊಂಡ ಅವಧಿ ಕೆಲವು ಗಂಟೆಗಳು ಮಾತ್ರ. ಟೀವಿಯಲ್ಲಿ ನಂತರ ಪ್ರಸಾರವಾದದ್ದೆಲ್ಲ ರಿಪೀಟ್ ಷೋ. ಆದರೆ, ಮೊನ್ನೆಯ ಮುಂಬೈ ಘಟನೆಯನ್ನು ತೆಗೆದುಕೊಳ್ಳಿ. ನಿರಂತರ ಮೂರು ದಿನ ಭಯೋತ್ಪಾದನೆಯ ನೇರ ಪ್ರಸಾರವನ್ನು ಭಾರತದ ಜನ ವೀಕ್ಷಿಸಿದರು. ಟಿಆರ್‌ಪಿ (ವೀಕ್ಷಣೆಯ ಒಂದು ಮಾಪನ) ಕ್ರಿಕೆಟ್ ಪ್ರಸಾರಕ್ಕಿಂತ ಹೆಚ್ಚಿತು. ೨೪ ಗಂಟೆ ಇಂಗ್ಲಿಷ್ ಸುದ್ದಿ ವಾಹಿನಗಳ ಟಿಆರ್‌ಪಿ ೩-೪ ಪಟ್ಟು ಹೆಚ್ಚಾದರೆ, ಹಿಂದಿ ಚಾನಲ್‌ಗಳ ಟಿಆರ್‌ಪಿ ೯ ಪಟ್ಟು ಹೆಚ್ಚಾಯಿತು. ಅಲ್ಲದೇ, ವಿಶ್ವಾದ್ಯಂತ ಜನರು ಈ ಭಯೋತ್ಪಾನೆಯನ್ನು ಗಮನಿಸಿದರು. ಪತ್ರಿಕೆಗಳಲ್ಲಿ ಪುಟಗಟ್ಟಲೆ ಓದಿದರು. ಎಷ್ಟು ಕಡಿಮೆ ಖರ್ಚಿನಲ್ಲಿ ಭಯೋತ್ಪಾದಕರು ಎಷ್ಟು ಪ್ರಚಾರ ಗಿಟ್ಟಿಸಿದರು ನೋಡಿ!

ಈ ಕಾರಣಗಳಿಂದ, ೯/೧೧ ಮಾದರಿ ಭಯೋತ್ಪಾದನೆಗಿಂತ ಫಿದಾಯೀ ಮಾದರಿ ದಾಳಿ ಇನ್ನು ಉಗ್ರರಿಗೆ ಅಚ್ಚುಮೆಚ್ಚಾಗಲಿದೆ ಎಂಬುದು ಜೋಶ್ ಹ್ಯಾಮರ್ ವಾದ.

ಲೋಕಲ್ ಉಗ್ರರ ಸಮಸ್ಯೆ

ಅಮೆರಿಕಕ್ಕೆ ಈಗ ಹೊಸ ಭಯೋತ್ಪಾದನಾ ಸಮಸ್ಯೆ ಎದುರಾಗಿದೆ. ಅದು Home Grown Terrorism ಸಮಸ್ಯೆ. ಅಂದರೆ ಒಂದು ದೇಶದಲ್ಲಿ ಆಂತರಿಕವಾಗಿ ಮೊಳಕೆಯೊಡೆಯುವ ಭಯೋತ್ಪಾದನೆ ಇದು. ಲೋಕಲ್ ಭಯೋತ್ಪಾದಕರ ಕೃತ್ಯ ಎಂದು ಸರಳವಾಗಿ ಹೇಳಬಹುದು. ಈ ವರೆಗೂ, ಭಾರತದಲ್ಲಿ ಈ ಸಮಸ್ಯೆ ತೀವ್ರವಾಗಿತ್ತು. ಅಮೆರಿಕದಲ್ಲಿ ಲೋಕಲ್ ಉಗ್ರರ ಸಮಸ್ಯೆ ಎಷ್ಟಿದೆ ಎಂದು ಪೊಲೀಸ್ ಅಧಿಕಾರಿ ಮಾರ್ಕ್ ವಿಲ್ಬರ್ಟ್ ಅವರನ್ನು ಕೇಳಿದೆ.

’೯/೧೧ ಘಟನೆ ನಂತರ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ Home Grown Terrorism ಸಮಸ್ಯೆ ಕುರಿತು ತೀವ್ರ ಗಮನ ಹರಿಸಿದೆ. ಇಷ್ಟು ವರ್ಷ ಅಮೆರಿಕದ ನೆಲದಲ್ಲೇ ಮೊಳಕೆಯೊಡದ ಆಂತರಿಕ ಭಯೋತ್ಪಾದನೆಯ ಚಿಂತೆ ಇರಲಿಲ್ಲ. ಹಾಗಾಗಿ, ನಮ್ಮ ಗಮನ ಹೊರದೇಶಗಳಿಂದ ಅಮೆರಿಕಕ್ಕೆ ಬರಬಹುದಾದ ಉಗ್ರರ ಬಗ್ಗೆ ಮಾತ್ರ ಹೆಚ್ಚಾಗಿತ್ತು. ಈಗ ಹಾಗಿಲ್ಲ. ಸ್ಥಳೀಯೋತ್ಪಾದಿತ ಉಗ್ರ ಚಟುವಟಿಕೆ ಅಮೆರಿಕದಲ್ಲೂ ಸುಪ್ತವಾಗಿದೆ.’

’೯/೧೧ ನಂತರ ಅಮೆರಿಕದಲ್ಲಿ ಯಾವುದೇ ಗಂಭೀರ ಉಗ್ರಗಾಮಿ ವಿಧ್ವಂಸಕ ಕೃತ್ಯ ನಡೆದಿಲ್ಲ. ಏಕೆಂದರೆ, ಭಾರತದಂತೆ ಅಮೆರಿಕದಲ್ಲಿ ಸ್ಧಳೀಯೋತ್ಪಾದಿತ ಉಗ್ರರು ಹೆಚ್ಚು ಇರಲಿಲ್ಲ. ಭಾರತದ ಸಮಸ್ಯೆ ಎಂದರೆ, ಅಲ್ಲಿ ಲೋಕಲ್ ಉಗ್ರರು ಸಾಕಷ್ಟಿದ್ದಾರೆ. ಸಾಲದು ಎಂಬಂತೆ ಅವರಿಗೆ ಹೊರಗಿನಿಂದ ಪ್ರಚೋದನೆ, ಬೆಂಬಲವೂ ಸಿಗುತ್ತಿದೆ. ಅಲ್ಲದೇ, ಹೊರಗಿನಿಂದ ಭಾರತಕ್ಕೆ ನುಸುಳುವ ಉಗ್ರರ ಸಮಸ್ಯೆಯೂ ಇದೆ. ಹೀಗೆ ದ್ವಿಮುಖ ಸಮಸ್ಯೆಯಲ್ಲಿ ಭಾರತ ಸಿಲುಕಿದೆ.’ ಎನ್ನುತ್ತಾರೆ ಅವರು.

ಬ್ರಿಟನ್, ಫ್ರಾನ್ಸ್, ಭಾರತದಲ್ಲಿ ಲೋಕಲ್ ಉಗ್ರರು

’ಲೋಕಲ್ ಉಗ್ರರ ಸಮಸ್ಯೆ ಬ್ರಿಟನ್, ಫ್ರಾನ್ಸ್ ಸೇರಿದಂತೆ ಯೂರೋಪಿನ ಕೆಲವು ದೇಶಗಳಲ್ಲೂ ಇದೆ. ಹಲವಾರು ವರ್ಷಗಳಿಂದ ಬ್ರಿಟನ್‌ನಲ್ಲಿ ಇಸ್ಲಾಮಿಕ್ ಕಾಲೋನಿಗಳು ಬೀಡುಬಿಟ್ಟಿವೆ. ಅಲ್ಲಿ, ಭಯೋತ್ಪಾದನಾ ಚಟುವಟಿಕೆಗಳು ಮೊಳಕೆಯೊಡೆದವು. ಕೊನೆಗೆ ಈ ಚಟುವಟಿಕೆಗಳು ಎಷ್ಟು ಹೆಚ್ಚಿದವೆಂದರೆ, ಅವರು ಲಂಡನ್‌ನ ಟ್ಯೂಬ್ ರೈಲುಗಳ ಮೇಲೆ ದಾಳಿ ಮಾಡಿದರು. ಈ ಮೊದಲು, ಮ್ಯಾಡ್ರಿಡ್ ರೈಲಿನ ಮೇಲೆ ದಾಳಿ ಮಾಡಿದ್ದೂ ಸ್ಥಳೀಯ ಉಗ್ರರೇ. ಆದ್ದರಿಂದ, ದೇಶದ ಭದ್ರತೆಗೆ ಲೋಕಲ್ ಉಗ್ರರ ಚಟುವಟಿಕೆ ಭಾರೀ ಅಪಾಯಕಾರಿ.’ ಎನ್ನುತ್ತಾರೆ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ವೆಬ್‌ಸೈಟಿನ ಸಹ ಸಂಪಾದಕ ಎಬೆನ್ ಕಪ್ಲಾನ್.

’ಭಾರತ, ಯೂರೋಪ್‌ನಲ್ಲಿ ಕಂಡ ಅಪಾಯಕಾರಿ ಲೋಕಲ್ ಉಗ್ರಗಾಮಿ ಚಟುವಟಿಕೆ ಈಗ ಅಮೆರಿಕದಲ್ಲೂ ಸ್ವಲ್ಪ ಸ್ವಲ್ಪವಾಗಿ ಕಾಣಿಸುತ್ತಿದೆ. ಇದನ್ನು ನಿಗ್ರಹಿಸುವುದು ನಮ್ಮ ಮುಂದಿರುವ ಸವಾಲು’ ಎನ್ನುತ್ತಾರೆ ಅವರು.

ಇದರ ನಿಗ್ರಹಕ್ಕಾಗಿ ಭಾರತದ ಪೋಟಾ ಕಾಯಿದೆ ಹೋಲುವ Violent Radicalization and Homegrown Terrorism Prevention Bill ಅಮೆರಿಕ ಸಂಸತ್ತಿನಲ್ಲಿ ಕಳೆದ ವರ್ಷ ಮಂಡನೆಯಾಗಿದೆ. ಕೆಳಮನೆಯಲ್ಲಿ ೪೦೪-೬ ಮತಗಳಿಂದ ಅಂಗೀಕಾರವಾಗಿದೆ. ಸೆನೆಟ್‌ನಲ್ಲಿ ಇನ್ನೂ ಅಂಗೀಕಾರ ಅಗಬೇಕಷ್ಟೇ.

ಉಗ್ರ ಚಟುವಟಿಕೆಗೆ ಪ್ರಶಸ್ತ ತಾಣ ಯಾವುದು?

ಯೂರೋಪ್ ಹಾಗೂ ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಮುಸ್ಲಿಂ ಜನಸಂಖ್ಯೆ ಕಡಿಮೆ. ಅದರಲ್ಲೂ ಅಮೆರಿಕದ ಮುಸ್ಲಿಮರು ತಮ್ಮದೇ ಪ್ರತ್ಯೇಕ ಗಲ್ಲಿ, ಕಾಲೋನಿ ಮಾಡಿಕೊಂಡಿಲ್ಲ ಎನ್ನುವುದು ದೊಡ್ಡ ಸಮಾದಾನ. ಈ ಮುಸ್ಲಿಮರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಹೋಗಿದ್ದಾರೆ. ಆದರೆ, ಲಂಡನ್, ಭಾರತ ಮೊದಲಾದ ಕಡೆ ಮುಸ್ಲಿಮರು ಪ್ರತ್ಯೇಕ ಸಮುದಾಯ ಮಾಡಿಕೊಂಡು ವಾಸಿಸುತ್ತಾರೆ. ಇದು ಭಯೋತ್ಪಾದನೆ ನಿಗ್ರಹದ ದೃಷ್ಟಿಯಿಂದ ಅಪಾಯಕಾರಿ. ಭಯೋತ್ಪಾದನೆಯ ಬೀಜ ಬಿತ್ತುವವರು ಮುಸ್ಲಿಂ ಸಮುದಾಯ ಸಾಕಷ್ಟು ಇರುವ ಗಲ್ಲಿ, ಬಡಾವಣೆಗಳಲ್ಲಿ ಕಾರ್‍ಯಾಚರಣೆ ಮಾಡುತ್ತಾರೆ. ಅಲ್ಲಿ ಉಗ್ರವಾದಿಗಳನ್ನು ಗುರುತಿಸಲು, ಅವರ ಮೇಲೆ ನಿಗಾ ಇಡಲು ಕಷ್ಟ ಅಲ್ಲದೇ, ಅವು ಉಗ್ರರಿಗೆ ಅಡಗಲು ಪ್ರಶಸ್ತ ಸ್ಥಳ. ಇಂತಹ ಪ್ರತ್ಯೇಕ ಮುಸ್ಲಿಂ ಕಾಲೋನಿಗಳು ತಲೆಎತ್ತದಂತೆ ಅಮೆರಿಕ ಎಚ್ಚರಿಕೆ ವಹಿಸುತ್ತಿದೆ ಎನ್ನುತ್ತಾರೆ ಎಬೆನ್.

ಜೈಲು, ಕಾಲೇಜು, ವಿಶ್ವವಿದ್ಯಾಲಯದಲ್ಲಿ ಉಗ್ರರು:

ಹೆಸರು ಹೇಳಲಿಚ್ಚಿಸದ ನ್ಯೂಯಾರ್ಕ್ ಸಿಟಿ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಅಮೆರಿಕದಲ್ಲಿ ಈಗಾಗಲೇ ಇಸ್ಲಾಮಿಕ್ ಉಗ್ರರ ಸ್ಥಳೀಯೋತ್ಪಾದನೆ ಆರಂಭವಾಗಿದೆ. ಮುಖ್ಯವಾಗಿ, ಜೈಲು, ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚಾಗಿ ಇಂತಹ ಸುಳಿವು ಸಿಗುತ್ತಿದೆ ಎಂದು ಎಚ್ಚರಿಸುತ್ತಾರೆ ಅವರು.

ಹಾಗೆಂದು, ಅಮೆರಿಕದಲ್ಲಿರುವ ಮುಸ್ಲಿಮರೆಲ್ಲ ಉಗ್ರರು ಎಂದಲ್ಲ. ಅಮೆರಿಕದ ಅನೇಕ ಮುಸ್ಲಿಮರೇ, ಶಂಕಿತ ಉಗ್ರರ ಮಾಹಿತಿಯನ್ನು ಪೊಲೀಸರಿಗೆ ಒದಗಿಸುತ್ತಾರೆ. ಉದಾಹರಣೆಗೆ: ಒಂದು ವರ್ಷದ ಹಿಂದೆ, ಪಾಕ್ ಮೂಲದ ಅಮೆರಿಕ ಪ್ರಜೆಯೊಬ್ಬ ಅಫಘಾನಿಸ್ತಾನಕ್ಕೆ ಹೋಗಿ ಭಯೋತ್ಪಾದನೆಯ ತರಬೇತಿ ಪಡೆದು ಬಂದಿದ್ದ. ಇದನ್ನು ಇಸ್ಲಾಂ ಸಮುದಾಯದ ವ್ಯಕ್ತಿಯೊಬ್ಬರು ಸ್ಥಳೀಯ ಪೊಲೀಸರ ಗಮನಕ್ಕೆ ತಂದರು ಎಂದು ಅವರು ಹೇಳುತ್ತಾರೆ.

ಮುಂದಿನ ದಾಳಿ ಲೋಕಲ್ ಉಗ್ರರಿಂದ:

ನ್ಯೂಯಾರ್ಕಿನ ಉಗ್ರನಿಗ್ರಹ ವಿಭಾಗದ ನಿವೃತ್ತ ಪೊಲೀಸ್ ಉಪ-ಆಯುಕ್ತ ರಿಚರ್ಡ್ ಫಾಲ್ಕನ್‌ರ್ಯಾಥ್ ಪ್ರಕಾರ -ಅಮೆರಿಕದ ನೆಲದಲ್ಲೇ ಮೊಳಕೆಯೊಡೆದ ಭಯೋತ್ಪಾದನಾ ಕೃತ್ಯಗಳು ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಅಮೆರಿಕದ ಯಾವುದೇ ನಗರದ ಮೇಲೆ ’ಫಾರಿನ್ ಉಗ್ರರಿಗಿಂತ’ ’ಸ್ಥಳೀಯ ಉಗ್ರರಿಂದ’ ದಾಳಿ ನಡೆಯುವ ಸಾಧ್ಯತೆಯೇ ಅಧಿಕವಾಗಿದೆ. ದಿನ ಕಳೆದಂತೆ ಈ ಆತಂಕ ಹೆಚ್ಚುತ್ತಿದೆ.

ಅಮೆರಿಕ ಈ ಉಗ್ರರನ್ನು ಹೇಗೆ ನಿಗ್ರಹಿಸುತ್ತದೆ?

ಲೋಕಲ್ ಉಗ್ರರನ್ನು ನಿಗ್ರಹಿಸಲು ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ತನ್ನ ವೀಸಾ ನೀತಿಯನ್ನು ಬಲಗೊಳಿಸಿದೆ. ತನ್ನ ಎಲ್ಲಾ ಗಡಿಗಳಲ್ಲೂ ಭದ್ರತೆ ಹೆಚ್ಚಿಸಿದೆ. ಸಾಗರದ ಮೂಲಕ ಬರುವ ಸರಕನ್ನೂ ವಿಮಾನ ನಿಲ್ದಾಣದ ಮಾದರಿಯಲ್ಲಿ ಪಕ್ಕಾ ಪರಿಶೀಲನೆಗೆ ಒಳಪಡಿಸುತ್ತಿದೆ. ತಂತ್ರಜ್ಞಾನವನ್ನು ಸಾಕಷ್ಟು ಬಳಸಿಕೊಳ್ಳುತ್ತಿದೆ. ಇಸ್ಲಾಮೇತರ ಉಗ್ರರ ಬಗ್ಗು ಎಚ್ಚರ ವಹಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ, ಭದ್ರತಾ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲವೇ ಇಲ್ಲ ಮತ್ತು ಭ್ರಷ್ಟಾಚಾರ ಪ್ರಮಾಣ ಅತ್ಯತ್ಪ.

ದಾಳಿಗೆ ೩೦ ನಿಮಿಷದಲ್ಲಿ ಪ್ರತಿದಾಳಿ ನಡೆಸದಿದ್ದರೆ ಅಪಾಯ:

ಅಮೆರಿಕದ ಭದ್ರತಾ ವ್ಯವಸ್ಥೆಗೂ, ಭಾರತದ ಭದ್ರತಾ ವ್ಯವಸ್ಥೆಗೂ ಇರುವ ಬಹುಮುಖ್ಯ ವ್ಯತ್ಯಾಸ ಅಂದರೆ, ಉಗ್ರರ ದಾಳಿಗೆ ಪ್ರತಿದಾಳಿ ನಡೆಸಲು ಭದ್ರತಾ ಪಡೆಗಳು ತೆಗೆದು ಕೊಳ್ಳುವ ಸಮಯ. ಮೊನ್ನೆ ಮುಂಬೈ ದಾಳಿಯ ವೇಳೆ ಉಗ್ರರ ದಾಳಿಗೆ ಪ್ರತಿಯಾಗಿ ಎನ್‌ಎಸ್‌ಜಿ ಕಮಾಂಡೋಗಳು ಪ್ರತಿದಾಳಿ ನಡೆಸಿದ್ದು ಬರೋಬ್ಬರಿ ೧೦ ಗಂಟೆಗಳ ನಂತರ. ಭದ್ರತಾ ತಜ್ಞರ ಪ್ರಕಾರ ಫಿದಾಯೀ ಉಗ್ರರು ದಾಳಿ ನಡೆಸಿದ ೩೦ ನಿಮಿಷದಲ್ಲಿ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಲು ವಿಫಲವಾದರೆ, ಉಗ್ರರು ಆಯಕಟ್ಟಿನ ಸ್ಥಳದಲ್ಲಿ ಸೇರಿಕೊಂಡು ಮೇಲುಗೈ ಸಾಧಿಸುತ್ತಾರೆ. ಮುಂಬೈ ಫಿದಾಯೀ ಉಗ್ರರ ದಾಳಿಯಲ್ಲಿ ಆದದ್ದು ಇದೇ. ಆದ್ದರಿಂದ ದಾಳಿ ನಡೆದ ಕೇವಲ ೨೦ ನಿಮಿಷದ ಒಳಗಾಗಿ ವಾಯು ದಾಳಿಯೂ ಸೇರಿದಂತೆ ಯಾವುದೇ ದಾಳಿ ನಡೆಸಲು ಅಮೆರಿಕ ಭದ್ರತಾ ಪಡೆಗಳು, ನಗರ ಪೊಲೀಸರು ಸಜ್ಜಾಗಿದ್ದಾರೆ. ಆದರೆ, ಇಷ್ಟು ವೇಗವಾಗಿ ಪ್ರತಿದಾಳಿ ನಡೆಸಲು ಭಾರತದಲ್ಲಿ ಇನ್ನೂ ಸಿದ್ಧತೆ ಸಾಲದು. ಭಾರತದ ಭದ್ರತಾ ವ್ಯವಸ್ಥಾಪಕರು ಅಮೆರಿಕ ಭದ್ರತಾ ತಜ್ಞರಿಂದ ಕಲಿಯ ಬೇಕಾದದ್ದು ಇದನ್ನೇ.



--------------------------------------

ವೈಟ್‌ಹೌಸ್, ಕ್ಯಾಪಿಟಾಲ್ ಒಳಗಡೆ ಪುಕ್ಕಟೆ ಪ್ರವಾಸ!


ವೈಟ್ ಹೌಸ್ ಬೇಲಿಯ ಮುಂದೆ ಪ್ರವಾಸಿಗರ ಸ್ವಚ್ಛಂದ ಓಡಾಟ


ವೈಟ್ ಹೌಸ್ ವಿಸಿಟರ್ ಸೆಂಟರ್ ಮೂಲಕ ಒಳಗಡೆ ಪ್ರವಾಸ

ದೆಹಲಿಯಲ್ಲಿರುವ ನಮ್ಮ ಸಂಸದ್ ಭವನದ ಒಳಗಾಗಲೀ, ರಾಷ್ಟ್ರಪತಿ ಭವನವದ ಒಳಗಾಗಲೀ ಹೋಗುವ, ನೋಡುವ ಭಾಗ್ಯ ನಿಮಗೆ ಸಿಕ್ಕಿಲ್ಲವೇ? ಪರವಾಗಿಲ್ಲ, ಅಮೆರಿಕಕ್ಕೆ ಹೋದರೆ, ಅಲ್ಲಿನ ರಾಷ್ಟ್ರಪತಿ ಭವನ ’ವೈಟ್‌ಹೌಸ್’ ಹಾಗೂ ಸಂಸದ್ ಭವನ ’ಕ್ಯಾಪಿಟಾಲ್’ ಒಳಗೆ ನೀವು ಪುಕ್ಕಟೆ ಪ್ರವಾಸ ಮಾಡಿ ಬರಬಹುದು! ನಮ್ಮ ಸಂಸದ್ ಭವನದ ಸುತ್ತ ಕಾಲು ಮೈಲಿಯಿಂದಲೇ ಭದ್ರತೆ ಶುರು. ಯುದ್ಧ ಭೂಮಿಯಂಥ ಬಂಕರ್‌ಗಳನ್ನು ಸಂಸದ್ ಭವನದ ಮುಂದೆ ಕಾಣಬಹುದು. ಸಂಸದರಿಂದ ಪಾಸ್ ಪಡೆದಿದ್ದರೂ ಒಳಗೆ ಪ್ರವೇಶ ಕಠಿಣ. ಉಳಿದ ಮಾಮೂಲಿ ಪ್ರಜೆಗಳಿಗಂತೂ ಪ್ರವೇಶವೇ ಸಿಗದು. ಪಾಸ್ ಪಡೆದು ಗ್ಯಾಲರಿಗೆ ಹೋದ ವಿಐಪಿಯೂ, ಸಂಸದ್ ಭವನದ ಒಳಗೆಲ್ಲಾ ಸುತ್ತು ಹಾಕಿ ಅಲ್ಲಿನ ಅಂದ ಚೆಂದ ನೋಡಲು ಸಾಧ್ಯವಿಲ್ಲ. ಆದರೆ, ಅಮೆರಿಕದಲ್ಲಿ ವೈಟ್‌ಹೌಸ್ ಹಾಗೂ ಕ್ಯಾಪಿಟಾಲ್‌ಗೆ ಪ್ರತಿದಿನವೂ ಸಾವಿರಾರು ಪ್ರವಾಸಿಗಳಿಗೆ ಉಚಿತ ಪ್ರವೇಶವಿದೆ. ಮೈಸೂರು ಅರಮನೆಯನ್ನೋ, ಹೈದರಾಬಾದಿನ ಸಲಾರ್ ಜಂಗ್ ಮ್ಯೂಜಿಯಮ್ಮನ್ನೋ ನೋಡಿದಷ್ಟು ಸುಲಭವಾಗಿ ವೈಟ್‌ಹೌಸನ್ನೂ, ಕ್ಯಾಪಿಟಾಲನ್ನೂ ನೋಡಬಹುದು. ಅಮೆರಿಕ ರಾಜ್ಯಗಳ ಕ್ಯಾಪಿಟಾಲ್ ನೋಡುವುದಂತೂ ಇನ್ನೂ ಸುಲಭ. ನಾನಂತೂ ಮ್ಯಾಡಿಸನ್ ಕ್ಯಾಪಿಟಾಲ್‌ಗೆ ಹೋಗಿ ಸೆನೆಟರ್‌ಗಳ ಆಸನದಲ್ಲಿ ಕುಳಿತು ಹರಟೆ ಹೊಡೆದು ಬಂದೆ. ನನ್ನನ್ನು ಕ್ಯಾರೆ ಎಂದು ಕೇಳುವವರು ಅಲ್ಲಿ ಯಾರೂ ಇರಲಿಲ್ಲ!