
ಭಾಗ - 5
ಪೆಡಲ್ ಇಲ್ಲ. ಕ್ಲಚ್ಚು, ಗೇರು, ಎಕ್ಸಿಲೇಟರ್ ಇಲ್ಲ. ಬ್ರೇಕ್ ಇಲ್ಲ. ತುಳಿಯುವುದು ಬೇಕಿಲ್ಲ. ಪೆಟ್ರೋಲ್ ಬೇಡ. ಸುಮ್ಮನೆ ಸೆಗ್‌ವೇ ಮೇಲೆ ನಿಂತ ಮನುಷ್ಯ ಮುಂದೆ ಬಾಗಿದರೆ ಸೆಗ್‌ವೇ ಮುಂದೆ ಓಡುತ್ತದೆ. ಹಿಂದೆ ಬಾಗಿದರೆ ಹಿಂದೆ ಹೋಗುತ್ತದೆ. ಗಾಡಿ ನಿಲ್ಲಿಸಬೇಕೆ? ಸುಮ್ಮನೆ ಸೆಗ್‌ವೇ ಮೇಲೆ ನೆಟ್ಟಗೆ ನಿಂತರಾಯಿತು!


ರಾವಣನ ಪುಷ್ಪಕ ವಿಮಾನ, ಅಲ್ಲಾವುದ್ದೀನನ ಹಾರುವ ಚಾಪೆ, ಹ್ಯಾರಿ ಪಾಟರ್‌ನ ಹಾರುವ ಕಸಬರಿಗೆ, ಸೂಪರ್ ಮ್ಯಾನ್‌ನ ಹಾರುವ ಉಡುಪು ಹಾಗೂ ವಿಜ್ಞಾನ ಕೌತುಕದ ಹಾರುವ ತಟ್ಟೆ... ಇವೆಲ್ಲಾ ಎಷ್ಟು ಅದ್ಭುತವೋ, ನನಗೆ ಸೆಗ್‌ವೇ ಕೂಡ ಅಷ್ಟೇ ವಂಡರ್‌ಪುಲ್!
ಎರಡೇ ವ್ಯತ್ಯಾಸ. ಒಂದು- ಅವೆಲ್ಲ ಹಾರುತ್ತವೆ. ಸೆಗ್‌ವೇ ನೆಲದ ಮೇಲೆ ಓಡುತ್ತದೆ. ಎರಡು -ಅವೆಲ್ಲ ಬರೀ ಕಲ್ಪನೆ. ಸೆಗ್‌ವೇ ವಾಸ್ತವ!
ಸೆಗ್‌ವೇ ಅಂದರೆ ಎರಡು ಚಕ್ರದ ಪುಟ್ಟ ವಾಹನ. ಆದರೆ, ಜಗತ್ತಿನ ಇನ್ನೆಲ್ಲಾ ವಾಹನಗಳಿಗಿಂತ ಭಿನ್ನ. ಅದಕ್ಕೇ ಎಷ್ಟೋ ದೇಶಗಳು ಇದನ್ನು ಇನ್ನೂ ವಾಹನ ಎಂದು ಪರಿಗಣಿಸಿಯೇ ಇಲ್ಲ! ಆದರೆ, ಇದು ಚಕ್ರದ ಆಧಾರದಲ್ಲಿ ಊರ ತುಂಬಾ ಚಲಿಸುತ್ತದೆಯಲ್ಲ? ಆದ್ದರಿಂದ ಇದು ವಾಹನವಲ್ಲದೇ ಮತ್ತೇನೂ ಅಲ್ಲ.
ಒಬ್ಬ ವ್ಯಕ್ತಿ ನಿಲ್ಲಲು ಸಾಲುವಷ್ಟು ಒಂದು ಮಣೆ. ಅದಕ್ಕೆ ಎರಡು ಚಕ್ರಗಳು. ಮಣೆಯ ಮೇಲೆ ನಿಂತ ಚಾಲಕನಿಗೆ ಹಿಡಿದುಕೊಳ್ಳಲು ಒಂದು ಗೂಟ! ನೋಡಲು ಸೆಗ್‌ವೇ ಅಂದರೆ ಇಷ್ಟೇ.

ಹೇಳಿ... ಸ್ಟೀರಿಂಗ್ ಇಲ್ಲದ ಹ್ಯಾರಿ ಪಾಟರ್‌ನ ಹಾರುವ ಕಸಬರಿಗೆಗಿಂತ, ಪೆಟ್ರೋಲ್ ಬೇಡದ ಅಲ್ಲಾವುದ್ದೀನನ ಹಾರುವ ಚಾಪೆಗಿಂತ, ಇಂಜಿನ್ ಇಲ್ಲದ ರಾವಣನ ಪುಷ್ಪಕ ವಿಮಾನಕ್ಕಿಂತ ಸೆಗ್‌ವೇ ಏನು ಕಡಿಮೆ ಅದ್ಭುತ!
ನಿಜ ಹೇಳಬೇಕೆಂದರೆ, ಶತಮಾನಗಳ ಹಿಂದೆ ಸೈಕಲ್ ಸಂಶೋಧನೆ ಆದ ನಂತರ ನಡೆದ ಅತಿ ಮಹತ್ವದ ವಾಹನಾನ್ವೇಷಣೆ ಸೆಗ್‌ವೇ -ಎಂದು ತಜ್ಞರು ಇದನ್ನು ಬಣ್ಣಿಸಿದ್ದಾರೆ. ವಿಮಾನ, ರೈಲು, ಹಡಗು, ಬೈಕು, ಕಾರು, ಲಾರಿ, ಬಸ್ಸುಗಳಂತೆ ಸೆಗ್‌ವೇ ಜಗತ್ತಿನ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ಉಂಟುಮಾಡುವುದಿಲ್ಲ. ಚಕ್ಕಡಿಗಾಡಿ, ಕುದುರೆ ಟಾಂಗಾದಂತೆ ಊರಿಂದ ಊರಿಗೆ ಹೋಗಲೂ ಸೆಗ್‌ವೇಯಿಂದ ಸಾಧ್ಯವಿಲ್ಲ. ಆದರೂ, ಸೆಗ್‌ವೇ ೨೦ನೇ ಶತಮಾನದ ಮ್ಯಾಜಿಕ್ ವಾಹನ. ಇಂಥ ಮ್ಯಾಜಿಕ್ ವಾಹನದ ಮೇಲೆ ಅಮೆರಿಕದ ರಾಜಧಾನಿಯನ್ನು ಸುತ್ತುವ ಸಂಭ್ರಮ ನನ್ನದಾಯಿತು.
ನನ್ನ ಸೆಗ್‌ವೇ ಸಂಭ್ರಮ

೨೦೦೧ರಲ್ಲಿ, ಜಗತ್ತಿಗೆ ಸೆಗ್‌ವೇ ಅನಾವರಣಗೊಂಡಾಗ, ಅದರ ಬಗ್ಗೆ ನಾನು ಇದೇ ಪತ್ರಿಕೆಯಲ್ಲಿ ಚಿಕ್ಕ ಬರಹ ಬರೆದಿದ್ದೆ. ಆನಂತರ, ಅದನ್ನು ನೆನಪಿಸಿಕೊಳ್ಳುವ ಅಥವಾ ನೋಡುವ ಅವಕಾಶವೇ ಬಂದಿರಲಿಲ್ಲ. ಆದರೀಗ, ನನ್ನ ಕಣ್ಣ ಮುಂದೆ ದಿಢೀರನೆ ಸೆಗ್‌ವೇ ಪ್ರತ್ಯಕ್ಷವಾಗಿತ್ತು. ನನಗಾಗ, ಮಕ್ಕಳಿಗೆ ಹೊಸ ಆಟಿಕೆ ಕಂಡಾಗ ಆಗುವಷ್ಟು ಸಂಭ್ರಮವಾದದ್ದು ಸುಳ್ಳಲ್ಲ.
ವಾಷಿಂಗ್ಟನ್ ಡಿಸಿ, ಶಿಕಾಗೋ, ಸ್ಯಾನ್‌ಪ್ರಾನ್ಸಿಸ್ಕೋ ಸೇರಿದಂತೆ ಅಮೆರಿಕದ ಕೆಲವು ನಗರಗಳಲ್ಲಿ ‘ಸಿಟಿ ಸೆಗ್‌ವೇ ಟೂರ್’ ಪ್ರವಾಸೀ ಸೌಕರ್ಯವಿದೆ. ಸುಮಾರು ೩ ಗಂಟೆಯ ಕಾಲ ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಸೆಗ್‌ವೇಯಲ್ಲಿ ಪ್ರವಾಸ ಕರೆದುಕೊಂಡು ಹೋಗುವ ಸಿಟಿ ಟೂರ್ ಪ್ಯಾಕೇಜ್ ಇದು. ಒಂದು ಸೆಗ್‌ವೇಯಲ್ಲಿ ಒಬ್ಬ ಟೂರ್ ಗೈಡ್ ಇರುತ್ತಾಳೆ. ಆ ಗೈಡನ್ನು ೮ರಿಂದ ೧೦ ಜನ ಪ್ರವಾಸಿಗಳು ಒಂದೊಂದು ಸೆಗ್‌ವೇಯಲ್ಲಿ ಹಿಂಬಾಲಿಸುತ್ತಾರೆ. ಪ್ರೇಕ್ಷಣೀಯ ಸ್ಥಳ ಬಂದಾಗ ಗೈಡ್ ಸೆಗ್‌ವೇ ನಿಲ್ಲಿಸಿ ಮಾಹಿತಿ ನೀಡುತ್ತಾಳೆ. ಅದಾದ ಬಳಿಕ ಈ ಸೆಗ್‌ವೇ ತಂಡ ಮುಂದಿನ ಪ್ರೇಕ್ಷಣೀಯ ಸ್ಥಳಕ್ಕೆ ಹೊರಡುತ್ತದೆ. ಈ ಮೂರು ಗಂಟೆಯ ಪ್ರವಾಸಕ್ಕೆ ೭೦ ಡಾಲರ್! ಸಾಮಾನ್ಯವಾಗಿ ಪ್ರತಿದಿನವೂ ಸೆಗ್‌ವೇ ಟೂರ್ ಪೂರ್ಣ ಬುಕ್ ಆಗಿರುತ್ತದೆ. ಆದ್ದರಿಂದ ತುಸು ಮುಂಗಡವಾಗಿ ಪ್ರವಾಸ ಬುಕ್ ಮಾಡಿಕೊಳ್ಳುವುದು ಒಳಿತು.
ಟೂರ್ ಆರಂಭಿಸುವ ಮೊದಲು, ಸೆಗ್‌ವೇ ಚಾಲನೆ ಮಾಡುವುದು ಹೇಗೆ ಎಂದು ಆರೇಳು ನಿಮಿಷ ಪ್ರಾತ್ಯಕ್ಷಿಕೆ ನೀಡುತ್ತಾರೆ. ಆಮೇಲೆ ಹತ್ತಿಪ್ಪತ್ತು ನಿಮಿಷ ಪ್ರವಾಸಿಗರಿಂದ ಸೆಗ್‌ವೇ ಚಾಲನೆಯ ತಾಲೀಮು ಮಾಡಿಸುತ್ತಾರೆ. ಅಷ್ಟು ಬೇಗ ಸೆಗ್‌ವೇ ಚಾಲನೆ ಕಲಿಯಬಹುದೇ ಎಂಬ ಸಂಶಯ ನನಗೂ ಇತ್ತು. ಆದರೆ, ನನಗೆ ಕೇವಲ ಐದು ನಿಮಿಷದಲ್ಲಿ ಸೆಗ್‌ವೇ ಮೇಲೆ ಹಿಡಿತ ಸಿಕ್ಕಿತು. ಅಂದರೆ, ಊಹಿಸಿ. ಸೆಗ್‌ವೇ ಚಾಲನೆ ಎಷ್ಟು ಸಲೀಸು ಎಂದು. ನಾನು ಚಿಕ್ಕವನಿರುವಾಗ ಅಪ್ಪ ನನಗೆ ಸೈಕಲ್ ಕಲಿಸಲು ವಾರಗಟ್ಟಲೆ ಕಷ್ಟಪಟ್ಟಿದ್ದನ್ನು, ಕಲಿತ ಹೊಸತರಲ್ಲಿ ನಾನು ಬಿದ್ದು ಗಾಯ ಮಾಡಿಕೊಂಡಿದ್ದನ್ನು ನೆನಪಿಸಿಕೊಂಡು ಮನಸ್ಸಿನಲ್ಲೇ ನಕ್ಕೆ.
ಆಟೋಮ್ಯಾಟಿಕ್ ಬ್ಯಾಲೆನ್ಸ್
ಸೆಗ್‌ವೇ ಮೇಲೆ ನಿಂತುಕೊಳ್ಳುವುದು ಸರ್ಕಸ್ ಅಲ್ಲವೇ ಅಲ್ಲ. ಸೆಗ್‌ವೇಯಲ್ಲಿ ಗೈರೋಸ್ಕೋಪ್, ಮೋಟರ್ ಮುಂತಾದ ಯಾಂತ್ರಿಕ ಭಾಗಗಳಿವೆ. ಆದರೆ ಅವೆಲ್ಲ ಹೊರಗಡೆಯಿಂದ ಕಾಣಲ್ಲ ಬಿಡಿ. ಸೆಗ್‌ವೇಯ ಮಣೆಯಲ್ಲಿ ಒಂದು ಕಂಪ್ಯೂಟರ್ ಇರುತ್ತದೆ. ಇದು ಸೆಗ್‌ವೇಯ ಸಮತೋಲನವನ್ನು ಸದಾ ಕಾಯ್ದುಕೊಳ್ಳುತ್ತದೆ. ಸೆಗ್‌ವೇ ಮೇಲೆ ನಿಂತ ವ್ಯಕ್ತಿಯ ಬ್ಯಾಲೆನ್ಸನ್ನೂ ಸೆಗ್‌ವೇ ಕಂಪ್ಯೂಟರೇ ಗಮನಿಸುತ್ತಿರುತ್ತದೆ. ವ್ಯಕ್ತಿ ಮುಂದೆ ಬಾಗಿದಾಗ ಸೆಗ್‌ವೇಯ ಗುರುತ್ವ (ಸೆಂಟರ್ ಆಫ್ ಗ್ರಾವಿಟಿ) ಮುಂದಕ್ಕೆ ಚಲಿಸುತ್ತದೆ. ಆಗ, ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸೆಗ್‌ವೇ ಕೂಡ ಮುಂದೆ ಚಲಿಸುತ್ತದೆ. ವ್ಯಕ್ತಿ ಮುಂದೆ ಬಾಗಿದಷ್ಟೂ ವೇಗ ಹೆಚ್ಚುತ್ತದೆ. ಅದೇ ರೀತಿ ಬಾಡಿ ಹಿಂದೆ ಬಾಗಿದರೆ ಗಾಡಿ ರಿವರ್‍ಸ್ ಚಲಿಸುತ್ತದೆ.
ಇದರ ಗರಿಷ್ಠ ವೇಗ ಗಂಟೆಗೆ ೨೦ ಕಿಮೀ. ಇದು ರೀಚಾರ್ಜೆಬಲ್ ಬ್ಯಾಟರಿ ಚಾಲಿತ, ಮಾಲಿನ್ಯ ರಹಿತ ವಾಹನ. ಇದರ ತೂಕ ಸುಮಾರು ೪೫ ಕೆಜಿ. ಇದರ ಮೇಲೆ ಸುಮಾರು ೧೦೦ ಕೆಜಿ ಭಾರದ ವ್ಯಕ್ತಿ ನಿಲ್ಲಬಹುದು. ಒಮ್ಮೆ ಚಾರ್ಜ್ ಮಾಡಿದರೆ, ೨೦-೨೫ ಕಿ.ಮೀ. ದೂರ ಕ್ರಮಿಸಬಹುದು. ಆದ್ದರಿಂದ, ಇದು ನಗರದ ಒಳಗೆ ಸಂಚರಿಸಲು ಮಾತ್ರ ಯೋಗ್ಯ.

ಟಿ ೩ ಲಕ್ಷ ರೂ ಬೆಲೆ: ಸೆಗ್‌ವೇಯಂಥ ಸರಳ, ಉಪಯುಕ್ತ ವಾಹನ ಏಕೆ ಇನ್ನೂ ಪ್ರಸಿದ್ಧವಾಗಿಲ್ಲ? ೨೦೦೧ರಲ್ಲಿ ಸೆಗ್‌ವೇ ಮೊಟ್ಟ ಮೊದಲು ಅನಾವರಣಗೊಂಡಾಗ ಇದು ಸಾರಿಗೆ ಕ್ರಾಂತಿ ಮಾಡುತ್ತದೆ ಎಂದೇ ಬಿಂಬಿಸಲಾಗಿತ್ತು. ಇನ್ನೂ ಈ ಪರ್ಸನಲ್ ಟ್ರಾನ್ಸ್ ಪೋರ್ಟರ್ ‘ಆಟಿಕೆ’ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಜಗತ್ತಿನಾದ್ಯಂತ ಇದು ಸೈಕಲ್‌ನಂತೆ ಜನಪ್ರಿಯವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಹಾಗಾಗಲಿಲ್ಲ. ಏಕೆಂದರೆ, ಇದರ ಬೆಲೆ ದುಬಾರಿ. ಅಮೆರಿಕದಲ್ಲಿ ಸುಮಾರು ೫-೬ ಸಾವಿರ ಡಾಲರ್. ಅಂದರೆ, ಭಾರತೀಯ ಲೆಕ್ಕದಲ್ಲಿ ಕನಿಷ್ಠ ೩ ಲಕ್ಷ ರುಪಾಯಿ. ಈ ಬೆಲೆಗೆ ಒಂದು ಕಾರು ಅಥವಾ ಬೈಕೇ ಸಿಗುತ್ತದೆ. ಅದರಿಂದಾಗಿ ಸೆಗ್‌ವೇ ಇನ್ನೂ ವೈಯಕ್ತಿಕ ವಾಹನವಾಗಿ ಬಳಕೆಗೆ ಬಂದಿಲ್ಲ.
ನಾನು ಸೆಗ್‌ವೇ ಸವಾರಿ ಮಾಡಿದ್ದು ಕೇವಲ ಮೂರು ಗಂಟೆ ಕಾಲ. ಆದರೆ, ಆ ಸೆಗ್‌ವೇ ಮೇಲೆ ವಾಷಿಂಗ್‌ಟನ್ ಡಿ.ಸಿ. ನೋಡಿದ ನೆನಪು ಚಿರಕಾಲ. ಅಮೆರಿಕದ ನಗರಗಳನ್ನು ನೋಡಲು ಅನೇಕ ಹವಾನಿಯಂತ್ರಿತ ಪ್ರವಾಸಿ ಬಸ್ಸುಗಳು, ರೂಫ್‌ಟಾಪ್ ವಾಹನಗಳೂ, ಸುಖಾಸೀನದ ಲಿಮೋಸಿನ್‌ಗಳೂ, ಪ್ರತಿಷ್ಠಿತ ಕಾರುಗಳೂ ಇವೆ. ಆದರೆ, ಸೆಗ್‌ವೇ ಟೂರ್ ಅನುಭವದ ಮುಂದೆ ಉಳಿದೆಲ್ಲ ವಾಹನಗಳ ನಗರ ಪ್ರವಾಸವೂ ತೀರಾ ಸಪ್ಪೆ.
---------------------------
ಮೈಸೂರು, ಹಂಪಿಗೆ ಬಂದ್ರೆ ಹಿಟ್
ಸೆಗ್‌ವೇ ಟೂರ್ ಭಾರತದಲ್ಲಿ ಎಲ್ಲೂ ಇರುವ ಬಗ್ಗೆ ಮಾಹಿತಿಯಿಲ್ಲ. ಬೆಂಗಳೂರು, ದೆಹಲಿ, ಕೊಲ್ಕತಾದ ದಟ್ಟ ಟ್ರಾಫಿಕ್‌ನಗರಿಗಿಂತ ಗೋವಾ, ಹಂಪಿ, ಮೈಸೂರಿನಂಥ ಊರಿನಲ್ಲಿ ‘ಸೆಗ್‌ವೇ ಸಿಟಿ ಸವಾರಿ’ ಹಿಟ್ ಆಗಬಹುದು.
- ಭಾರತದ ಸೆಗ್‌ವೇ ವಾಹನದ ಅಧಿಕೃತ ಡೀಲರ್
ಸ್ಟಾರ್ ಪರ್ಸನಲ್ ಟ್ರಾನ್ಸ್ ಪೋರ್ಟ್ ಪ್ರೈ. ಲಿ,
ನಂ.೨೮, ಫ್ರೆಂಡ್ಸ್ ಕಾಲೋನಿ (ವೆಸ್ಟ್),
ನವದೆಹಲಿ, ೧೧೦೦೬೫.
-ಸೆಗ್‌ವೇ ವೆಬ್‌ಸೈಟ್: http://www.segway.com
No comments:
Post a Comment