
ಭಾಗ-1
ಅಮೆರಿಕದ ವೃತ್ತಪತ್ರಿಕೆಗಳನ್ನು ಈಗ Dying Media‘ಸಾಯುತ್ತಿರುವ ಮಾಧ್ಯಮ’ ಎಂದೇ ಬಣ್ಣಿಸಲಾಗುತ್ತಿದೆ. ಯಾಕೆಂದರೆ, ಅಮೆರಿಕ ಪತ್ರಿಕೆಗಳ ಓದುಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕಾ ಸಂಸ್ಥೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ.

ಅಂದರೆ, ಇನ್ನು ಸುಮಾರು ೩೫ ವರ್ಷಗಳ ಮುಂದೆ ಒಂದು ದಿನ ಮುಂಜಾನೆ... ಆತ ದೊಡ್ಡದಾಗಿ ಬಾಯಿ ತೆರೆದು, ಆಕಳಿಸಿ, ಕೈಯಲ್ಲಿದ್ದ ಪತ್ರಿಕೆಯನ್ನು ಮುದ್ದೆ ಮಾಡಿ ಬದಿಗೆ ಎಸೆಯುತ್ತಾನೆ. ಅದು ಅಮೆರಿಕ ಪತ್ರಿಕೆಗಳ ಕಟ್ಟ ಕಡೆಯ ದಿನ. ಅದು ಅಮೆರಿಕ ಪತ್ರಿಕೆಗಳ ಕಟ್ಟ ಕಡೆಯ ಸಂಚಿಕೆ ಹಾಗೂ ಆತನೇ ಆ ಪತ್ರಿಕೆಯ ಕಟ್ಟ ಕಡೆಯ ಓದುಗ! ಅಲ್ಲಿಗೆ ಅಮೆರಿಕದ ಎಲ್ಲ ಪ್ರಮುಖ ಪತ್ರಿಕೆಗಳ ಕಥೆಯೂ ಮುಗಿಯುತ್ತದೆ. ದಿ ನ್ಯೂಯಾರ್ಕ್ ಟೈಮ್ಸ್, ವಾಲ್ಸ್ಟ್ರೀಟ್ ಜರ್ನಲ್, ದಿ ವಾಷಿಂಗ್ಟನ್ ಪೋಸ್ಟ್, ಷಿಕಾಗೋ ಟ್ರಿಬ್ಯೂನ್, ಲಾಸ್ ಎಂಜಲೀಸ್ ಟೈಮ್ಸ್.. ಹೀಗೆ ಎಲ್ಲ ಪತ್ರಿಕೆಗಳೂ ಇತಿಹಾಸದ ಕಸದ ಬುಟ್ಟಿ ಸೇರುತ್ತವೆ.
ಫಿಲಿಪ್ ಮೇಯರ್ ಎಂಬ ಪತ್ರಿಕಾ-ಉದ್ಯಮ ತಜ್ಞ ‘ದಿ ವ್ಯಾನಿಷಿಂಗ್ ನ್ಯೂಸ್ ಪೇಪರ್ಸ್’ ಎಂಬ ಕೃತಿಯಲ್ಲಿ ಹೇಳಿರುವ ಭವಿಷ್ಯ ಇದು.
ಕಳೆದ ತಿಂಗಳು ನಾನು ಅಮೆರಿಕಕ್ಕೆ ಹೋದಾಗ ಆತನ ಭವಿಷ್ಯ ನಿಜವಾಗುತ್ತಿರುವುದನ್ನು ಕಣ್ಣಾರೆ ಕಂಡೆ. ಪತ್ರಿಕಾ ಮಾಲೀಕರು, ಗಾಬರಿಗೊಂಡಿರುವುದನ್ನು ನೋಡಿದೆ. ಅವರು, ಉಳಿವಿಗಾಗಿ ಹುಲ್ಲುಕಡ್ಡಿಯ ಆಸರೆ ಹುಡುಕುತ್ತಿರುವುದನ್ನು ಗಮನಿಸಿದೆ.
ಅಮೆರಿಕದ ವೃತ್ತಪತ್ರಿಕೆಗಳನ್ನು ಈಗ Dying Media‘ಸಾಯುತ್ತಿರುವ ಮಾಧ್ಯಮ’ ಎಂದೇ ಬಣ್ಣಿಸಲಾಗುತ್ತಿದೆ. ಯಾಕೆಂದರೆ, ಅಮೆರಿಕ ಪತ್ರಿಕೆಗಳ ಓದುಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕಾ ಸಂಸ್ಥೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ.
ಯಾಕೆ?
ಅಮೆರಿಕದಂಥ ಅತ್ಯಂತ ಸಾಕ್ಷರರ ದೇಶದಲ್ಲಿ ಪತ್ರಿಕೆಗಳು ಯಾಕೆ ಸಾಯುತ್ತಿವೆ?
ಇಂಟರ್ನೆಟ್ ಈಸ್ ದ ಕಿಲ್ಲರ್! ಇಂಟರ್ನೆಟ್ ಎಂಬ ‘ಹೊಸ ಮಾಧ್ಯಮ’ಕ್ಕೆ ಜಗತ್ತಿನ ಅತ್ಯಂತ ಪುರಾತನ ಸಮೂಹ ಮಾಧ್ಯಮ ‘ಪತ್ರಿಕೆ’ ಬಲಿಯಾಗುತ್ತಿದೆ. ಅಮೆರಿಕ, ಪಶ್ಚಿಮ ಯೂರೋಪ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ, ೩-೪ ದಶಕಗಳಿಂದ ಪತ್ರಿಕೆಗಳ ಸಂಖ್ಯೆ ಸ್ವಲ್ಪ ಸ್ವಲ್ಪವಾಗಿ ಇಳಿಮುಖವಾಗಿತ್ತು. ಅದಕ್ಕೆ ಟೀವಿಯ ಪ್ರಭಾವ ಕಾರಣವಾಗಿತ್ತು. ಆದರೆ, ಈಗ ಇಂಟರ್ನೆಟ್ನ ಪ್ರಹಾರ ಎಷ್ಟು ತೀವ್ರವಾಗಿದೆ ಎಂದರೆ ಅಮೆರಿಕದ ಪತ್ರಿಕೆಗಳ ಪ್ರಸಾರ ಹಾಗೂ ಜಾಹೀರಾತು ಆದಾಯ ಪ್ರಪಾತಕ್ಕೆ ಬೀಳುತ್ತಿದೆ.
ಸುಮಾರು ೧೦-೧೫ ವರ್ಷಗಳ ಹಿಂದೆ ಪತ್ರಿಕೆಗಳು ತಮ್ಮ ಮುಖ್ಯವಾಹಿನಿಗೆ ಪೂರಕವಾಗಿ ‘ಸೈಡ್ ಬಿಸಿನೆಸ್’ ಎಂದು ಅಂತರ್ಜಾಲ ಆವೃತ್ತಿಯನ್ನು ಆರಂಭಿಸಿದವು. ಆದರೆ, ಈ ಸೈಡ್ ಬಿಸಿನೆಸ್ಸೇ ತನಗೆ ಸುಸೈಡಲ್ ಆಗುತ್ತದೆ ಎಂದು ಆಗ ಪತ್ರಿಕೆಗಳು ಅಂದುಕೊಂಡಿರಲಿಲ್ಲ.
ಇಂದು ಅಮೆರಿಕದ ಯುವಕರಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸವೇ ಕಡಿಮೆಯಾಗುತ್ತಿದೆ. ಸಾಲದು ಎಂಬಂತೆ, ಕಚೇರಿಗೆ ಹೋಗುವವರೂ ಅಂತರ್ಜಾಲದಲ್ಲಿ ‘ಬ್ರೇಕಿಂಗ್ ನ್ಯೂಸ್’ ಓದಲು ಕಲಿತಿದ್ದಾರೆ. ಅದರಲ್ಲೂ, ಅಂತರ್ಜಾಲದಲ್ಲಿ ಪುಕ್ಕಟೆಯಾಗಿ ಹಲವಾರು ಪತ್ರಿಕೆಗಳನ್ನು ಓದಬಹುದು. ‘ಗೂಗಲ್ ನ್ಯೂಸ್’ ಎಂಬ ಅಂತರ್ಜಾಲ ಸುದ್ದಿ ಸರ್ಚ್ ಎಂಜಿನ್ ಬಂದಮೇಲಂತೂ ತಮಗೆ ಆಸಕ್ತಿ ಇರುವ ಸುದ್ದಿಗಳನ್ನು ಮಾತ್ರ ಜಗತ್ತಿನ ಎಲ್ಲ ಪತ್ರಿಕೆಗಳಿಂದ ಆರಿಸಿ ಓದಲು ಬಹಳ ಅನುಕೂಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂತರ್ಜಾಲ ಸುದ್ದಿ ಮಾಧ್ಯಮ ಮುದ್ರಣ ಮಾಧ್ಯಮಕ್ಕಿಂತ ಹೆಚ್ಚು ಇಂಟರ್ಯಾಕ್ಟಿವ್ ಆಗಿದೆ. ಸುದ್ದಿಗಳಿಗೆ ತಾವೂ ತಕ್ಷಣ ಪ್ರತಿಕ್ರಿಯೆ ನೀಡಲು, ಪರಸ್ಪರ ವಿಚಾರ ವಿನಿಮಯ ಮಾಡಲು, ಆಸಕ್ತಿದಾಯಕ ವಿಷಯಗಳನ್ನು ತಮ್ಮ ಮಿತ್ರರಿಗೆ ತಕ್ಷಣ ಕಳಿಸಲು, ಬ್ಲಾಗುಗಳ ಮೂಲಕ ತಮ್ಮದೇ ಸಂಪಾದಕೀಯ ಬರೆಯಲೂ ಅಂತರ್ಜಾಲ ಪತ್ರಿಕೆಗಳು ಅನುವು ಮಾಡುತ್ತವೆ. ಹಾಗಾಗಿ, ಮುದ್ರಿತ ಪತ್ರಿಕೆಗಳಿಂದ ಓದುಗರು ದೂರವಾಗಿ ಇಂಟರ್ನೆಟ್ ಪತ್ರಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ.ಇನ್ನೊಂದೆಡೆ, ಜಾಹೀರಾತುದಾರರಿಗೆ ಅಂತರ್ಜಾಲ ಸೋವಿ ಮಾರ್ಗವಾಗಿದೆ. ಕಡಿಮೆ ಖರ್ಚಿನಲ್ಲಿ ಗ್ರಾಹಕರನ್ನು ತಲುಪಲು ಅಂತರ್ಜಾಲ ಸಹಾಯ ಮಾಡುತ್ತದೆ. ಸಿನಿಮಾ, ರಾಕ್ ಷೋ, ಮ್ಯೂಸಿಕ್ ಸೀಡಿಯಂಥ ಮನರಂಜನಾ ಕ್ಷೇತ್ರದ ಜಾಹೀರಾತುಗಳು ನೇರವಾಗಿ ಇಂಟರ್ನೆಟ್ ಹಾಗೂ ಟೀವಿಯತ್ತ ಹರಿದುಹೋಗಿವೆ. ಅದರಲ್ಲೂ ವರ್ಗೀಕೃತ ಜಾಹೀರಾತುಗಳಂತೂ ಶೇ.೯೦ರಷ್ಟು ebay.comನಂಥ ಇಂಟರ್ನೆಟ್ ಪೋರ್ಟಲ್ಗಳಿಗೆ ರವಾನೆಯಾಗಿವೆ.
ಕೆಲವೇ ವರ್ಷಗಳ ಹಿಂದೆ, ‘ಮಾಧ್ಯಮ ದೊರೆ’ ರೂಪರ್ಟ್ ಮರ್ಡೋಕ್ ಹೇಳಿದ್ದ : ‘ವರ್ಗೀಕೃತ ಜಾಹೀರಾತುಗಳೆಂದರೆ ಪತ್ರಿಕೆಗಳಿಗೆ ಹರಿದುಬರುವ ಬಂಗಾರದ ನದಿ’ ಎಂದು. ಈಗ ಆತ ಹೇಳುತ್ತಾನೆ : ‘ಕೆಲವು ಬಾರಿ ನದಿಗಳು ಬತ್ತಿಹೋಗುತ್ತವೆ’ ಎಂದು!
೭೦೦೦ ಪತ್ರಕರ್ತರ ವಜಾ
ಒಂದೆಡೆ ಪ್ರಸಾರ ಸಂಖ್ಯೆ ಇಳಿಯುತ್ತಿದ್ದರೆ ಇನ್ನೊಂದೆಡೆ ಜಾಹೀರಾತು ಆದಾಯವೂ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ವೆಚ್ಚಗಳು ಅಧಿಕವಾಗುತ್ತಿವೆ. ಸಾಲದ್ದಕ್ಕೆ ಈಗಿನ ಆರ್ಥಿಕ ಹಿಂಜರಿತ ಬೇರೆ! ಈ ಹೊಡೆತ ತಾಳಲಾರದೇ ಅಮೆರಿಕದ ಪತ್ರಿಕೆಗಳು ತಮ್ಮ ಉತ್ಪಾದನಾ ವೆಚ್ಚ ಕಡಿತ ಮಾಡಲು ಆರಂಭಿಸಿವೆ. ಅಮೆರಿಕ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಹಾಗೂ ಪತ್ರಕರ್ತರು ಇರುವುದು ವಾಡಿಕೆ. ಹಾಗಾಗಿ, ವೆಚ್ಚ ಕಡಿತದ ಮೊದಲ ಪರಿಣಾಮ ಆಗಿರುವುದು ಪತ್ರಕರ್ತರ ಮೇಲೆ. ಕೇವಲ ಕಳೆದ ೩ ತಿಂಗಳಲ್ಲಿ ಅಮೆರಿಕದಲ್ಲಿ ೭೦೦೦ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸ ಕಳೆದುಕೊಂಡ ಇತರ ಸಿಬ್ಬಂದಿಗಳ ಸಂಖ್ಯೆ ದುಪ್ಪಟ್ಟು.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಮೊದಲು ವಿಶ್ವದ ಅನೇಕ ದೇಶಗಳಲ್ಲಿ ತನ್ನ ವಿಶೇಷ ಬಾತ್ಮೀದಾರರನ್ನು ಹೊಂದಿತ್ತು. ಇಂದು ಅವರನ್ನೆಲ್ಲ ವಜಾ ಮಾಡಿ ಆ ಸ್ಥಾನದಲ್ಲಿ ಅಗ್ಗದ ವೇತನಕ್ಕೆ ದೊರಕುವ ಬಿಡಿ ಸುದ್ದಿಗಾರರನ್ನು ನೇಮಕ ಮಾಡಿದೆ. ಇದು ಅನಿವಾರ್ಯ ಎನ್ನುತ್ತಾರೆ ಪತ್ರಿಕೆಯ ಮ್ಯಾನೇಜಿಂಗ್ ಎಡಿಟರ್ ಫಿಲಿಫ್ ಬೆನೆಟ್.
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮಾಲೀಕ ಆರ್ಥರ್ ಸಲ್ಸ್ಬರ್ಗರ್ (ಜ್ಯೂನಿಯರ್) ಅವರ ಅಭಿಪ್ರಾಯವೂ ಭಿನ್ನವಾಗಿಲ್ಲ. ‘ಈಗ ಓದುಗರೆಲ್ಲ ಇಂಟರ್ನೆಟ್ನತ್ತ ವಾಲಿದ್ದಾರೆ. ಹಾಗಾಗಿ ಅವರಿರುವತ್ತಲೇ ನಾವೂ ಸಾಗಬೇಕಾಗಿದೆ. ಈ ಕಾರಣಕ್ಕೆ ನಾವು ನಮ್ಮ ಮುದ್ರಣ ಆವೃತ್ತಿಯಲ್ಲಿ ಹಣ ಹೂಡಿಕೆ ಕಡಿಮೆ ಮಾಡಿ ಅಂತರ್ಜಾಲ ಆವೃತ್ತಿಗೆ ಸಾಕಷ್ಟು ಬಂಡವಾಳ ಹೂಡುತ್ತಿದ್ದೇವೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬದುಕಬೇಕೆಂದರೆ ಈಗ ನಮಗದೊಂದೇ ದಾರಿ’ ಎನ್ನುತ್ತಾರೆ ಅವರು.

ಭಾರತದಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕಾ ಸಮೂಹದಂತೆ ೩-೪ ರಾಷ್ಟ್ರೀಯ ಪತ್ರಿಕೆಗಳಿವೆ. ಆದರೆ, ಅಮೆರಿಕದಲ್ಲಿ ರಾಷ್ಟ್ರೀಯ ಪತ್ರಿಕೆಗಳಿಲ್ಲ. ನ್ಯೂಯಾರ್ಕ್ ಟೈಮ್ಸ್ ನ್ಯೂಯಾರ್ಕಿನ ಪತ್ರಿಕೆಯಾದರೆ, ವಾಷಿಂಗ್ಟನ್ ಪೋಸ್ಟ್ ವಾಷಿಂಗ್ಟನ್ ಡಿ.ಸಿ.ಯ ಪತ್ರಿಕೆ. ‘ಷಿಕಾಗೋ ಟ್ರಿಬ್ಯೂನ್’ ಷಿಕಾಗೋಗೂ, ‘ಲಾಸ್ಎಂಜಲೀಸ್ ಟೈಮ್ಸ್’ ಲಾಸ್ ಎಂಜಲೀಸ್ಗೂ ಸೀಮಿತ. ಸ್ಯಾನ್ಫ್ರಾನ್ಸಿಸ್ಕೋಗೆ ‘ಸ್ಯಾಕ್ರಮೆಂಟೋ ಬೀ’ ಹಾಗೂ ವಿಸ್ಕಾನ್ಸಿನ್ಗೆ ‘ಮಿಲ್ವಾಕೀ ಜರ್ನಲ್’ ಎಂಬ ಪತ್ರಿಕೆಗಳಿವೆ. ಹೀಗೆ, ಒಂದೊಂದು ರಾಜ್ಯದಲ್ಲಿ ಒಂದೊಂದು ಪತ್ರಿಕೆಯ ಸಾಮ್ರಾಜ್ಯವಿದೆ.
ಇದ್ದುದರಲ್ಲಿ ನ್ಯೂಯಾರ್ಕ್ ಟೈಮ್ಸ್ ಹಾಗೂ ವಾಲ್ಸ್ಟ್ರೀಟ್ ಜರ್ನಲ್ ಪತ್ರಿಕೆಗಳು ನ್ಯೂಯಾರ್ಕ್ ಹೊರತುಪಡಿಸಿ ಅಮೆರಿಕದ ಇನ್ನೂ ಕೆಲವು ನಗರಗಳಲ್ಲಿ ದೊರೆಯುತ್ತದೆ.
ಯುಎಸ್ಎ ಟುಡೇ ಎಂಬ ಇನ್ನೊಂದು ಪತ್ರಿಕೆಯಿದೆ. ಇದು ಅಮೆರಿಕದ ಬಹುತೇಕ ನಗರಗಳಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶಗಳಲ್ಲೂ ಲಭ್ಯ. ಹಾಗೆ ನೋಡಿದರೆ, ಇದೊಂದೇ ಅಮೆರಿಕದ ರಾಷ್ಟ್ರೀಯ ಪತ್ರಿಕೆ. ಯುಎಸ್ಎ ಟುಡೇ ತನ್ನನ್ನು ಅಮೆರಿಕದ ಏಕೈಕ ರಾಷ್ಟ್ರೀಯ ಪತ್ರಿಕೆ ಎಂದೇ ಕರೆದುಕೊಳ್ಳುತ್ತದೆ. ಆದರೆ, ಪತ್ರಿಕೋದ್ಯಮದಲ್ಲಿ ಇದನ್ನು ಯಾರೂ ಗಂಭೀರ ಪತ್ರಿಕೆ ಎಂದು ಹೇಳುವುದೇ ಇಲ್ಲ. ಅಮೆರಿಕದ ಸಾರ್ವಜನಿಕ ಲೈಬ್ರರಿಗಳಲ್ಲಿ ಅಲ್ಲಿನ ಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ, ಯುಎಸ್ಎ ಟುಡೇ ಪತ್ರಿಕೆಯನ್ನು ಹಾಗೆ ಸಂಗ್ರಹಿಸುವುದು ಹಾಗಿರಲಿ ಲೈಬ್ರರಿಗೆ ತರಿಸುವುದೂ ಇಲ್ಲ.
ಇದಕ್ಕೆ ಅಮೆರಿಕ ಪತ್ರಿಕೋದ್ಯಮದ ತೀರಾ ಮಡಿವಂತಿಕೆಯೇ ಕಾರಣ. ಅಮೆರಿಕದ ಟೀವಿ ಸುದ್ದಿ ವಾಹಿನಿಗಳು ಮಡಿವಂತಿಕೆ ಬಿಟ್ಟರೂ ಅಮೆರಿಕದ ಮುಖ್ಯ ಪತ್ರಿಕೆಗಳು ಪತ್ರಿಕೋದ್ಯಮದ ‘ಬ್ರಾಹ್ಮಣ್ಯ’ವನ್ನು ಇನ್ನೂ ಪಾಲಿಸುತ್ತಿವೆ. ಅದೆಷ್ಟು ಸಂಪ್ರದಾಯವೆಂದರೆ, ಜಗತ್ಪ್ರಸಿದ್ಧ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟ ಇಂದೂ ಸಹ ೧೮೭೮ನೇ ಇಸವಿಯ ಪತ್ರಿಕೆಯಂತೆ ಕಾಣುತ್ತದೆ. ಇಂದಿನ ಆರ್ಥಿಕ ಸಂಕಷ್ಟದಲ್ಲೂ ಈ ಪತ್ರಿಕೆಗಳು ತಮ್ಮ ಮುಖಪುಟದಲ್ಲಿ ದೊಡ್ಡ ಜಾಹೀರಾತು ಪ್ರಕಟಿಸುವುದಿಲ್ಲ. ಪುಟದ ಅಡಿಯಲ್ಲಿ ೩ ಸೆಂ.ಮೀ. ಎತ್ತರದ ಜಾಹೀರಾತು ಮಾತ್ರ ಪ್ರಕಟಿಸುತ್ತವೆ.
ಅಮೆರಿಕದ ಪತ್ರಿಕೆಗಳಲ್ಲಿ ಮೇಧಾವಿಗಳು, ವೃತ್ತಿಪರರೂ ಇದ್ದಾರೆ. ಆದರೆ, ಅವರೆಲ್ಲ ಇನ್ನೂ ಹಳೆಯ ಮಡಿವಂತ ಪತ್ರಿಕೋದ್ಯಮಕ್ಕೇ ಅಂಟಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಅಮೆರಿಕ ಅಂದರೆ ಲ್ಯಾಂಡ್ ಆಫ್ ಗ್ರಾಫಿಕ್ಸ್. ಡೈನಾಸರ್, ಗಾಡ್ಝಿಲಾಗಳನ್ನು ಸೃಷ್ಟಿಸಿದ ನೆಲ ಇದು. ಅಮೆರಿಕದ ಟೀವಿ ಮಾಧ್ಯಮದಲ್ಲೂ, ಹಾಲಿವುಡ್ ಸಿನಿಮಾಗಳಲ್ಲೂ ಗ್ರಾಫಿಕ್ ವಿಜೃಂಭಿಸುತ್ತದೆ. ಭಾರತದ ‘ದಿ ಹಿಂದೂ’ವಿನಂಥ ಮಂಡಿವಂತ ಪತ್ರಿಕೆಗಳೂ ಅಮೆರಿಕದಿಂದ ವಿಶ್ವವಿಖ್ಯಾತ ಪತ್ರಿಕಾ ವಿನ್ಯಾಸಕಾರ ಮಾರಿಯೋ ಗಾರ್ಸಿಯಾನನ್ನು ಕರೆತಂದು ಕೋಟಿಗಟ್ಟಲೆ ರುಪಾಯಿ ಖರ್ಚು ಮಾಡಿ ಪತ್ರಿಕೆಗೆ ಆಧುನಿಕ ರೂಪ ನೀಡುತ್ತವೆ. ಆದರೆ, ಅಮೆರಿಕದ ಪ್ರಮುಖ ಪತ್ರಿಕೆಗಳು ತಮ್ಮ ಪತ್ರಿಕೆಗಳನ್ನು ಇನ್ನೂ ಹಳೆಯ ಶೈಲಿಯಲ್ಲೇ ಹೊರತರುತ್ತಿವೆ. ಬಹುಶಃ ಅದಕ್ಕೇ ಹೊಸ ಜನಾಂಗಕ್ಕೆ ಸಾಂಪ್ರದಾಯಿಕ ಪತ್ರಿಕೆಗಳು ರುಚಿಸುತ್ತಿಲ್ಲ. ಪರಿಣಾಮವಾಗಿ ಅವರು ಪತ್ರಿಕೆಗಳನ್ನು ಬಿಟ್ಟು ಅಂತರ್ಜಾಲಕ್ಕೆ ಮೊರೆಹೋಗಿದ್ದಾರೆ.
ಸ್ಪಾನಿಷ್, ಚೈನೀಸ್ ಏರಿಕೆ
ಇನ್ನೊಂದು ಗಮನೀಯ ಅಂಶ ಎಂದರೆ, ಅಮೆರಿಕದಲ್ಲಿ ಇಂಗ್ಲಿಷ್ ಪತ್ರಿಕೆಗಳು ಅವಸಾನಗೊಳ್ಳುತ್ತಿದ್ದರೂ, ಸ್ಪಾನಿಷ್ ಹಾಗೂ ಚೈನೀಸ್ ಭಾಷೆಯ ಪತ್ರಿಕೆಗಳ ಪ್ರಸಾರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಬಡಾವಣೆಗಳಿಗೆ ಸೀಮಿತವಾದ ಸಣ್ಣ ‘ನೈಬರ್ಹುಡ್’ ಪತ್ರಿಕೆಗಳನ್ನು ಜನರು ಓದುತ್ತಿದ್ದಾರೆ. ಜಾಹೀರಾತುಗಳನ್ನೇ ನಂಬಿರುವ ಟ್ಯಾಬ್ಲಾಯ್ಡ್ ಗಾತ್ರದ ‘ಉಚಿತ’ ಪತ್ರಿಕೆಗಳು ಲಾಭದಲ್ಲಿ ನಡೆಯುತ್ತಿವೆ. ಸಂಕಷ್ಟದಲ್ಲಿರುವುದು ದೊಡ್ಡ ಪತ್ರಿಕೆಗಳು ಮಾತ್ರ. ಅವುಗಳಿಗೆ ಮುಂದಿನ ದಾರಿ ಹೇಗೋ ಗೊತ್ತಿಲ್ಲ.
ಉದಾರ ದೇಣಿಗೆ ಕೊಡಿ
ಒಂದು ಕಾಲದಲ್ಲಿ ಅಮೆರಿಕದ ಪತ್ರಿಕೋದ್ಯಮ ಎಷ್ಟು ಬಲಿಷ್ಠವಾಗಿತ್ತು ಎಂದರೆ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಇಬ್ಬರು ವರದಿಗಾರರು ಬಯಲುಗೊಳಿಸಿದ ವಾಟರ್ಗೇಟ್ ಹಗರಣದಿಂದ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆ ನೀಡಬೇಕಾಯಿತು. ಆದರೆ, ಇಂದು ಅದೇ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ತನಿಖಾ ಪತ್ರಿಕೋದ್ಯಮಕ್ಕೆ ವ್ಯಯಮಾಡುತ್ತಿದ್ದ ಹಣದ ಮೇಲೆ ಕಡಿವಾಣ ಹಾಕಿದೆ. ಒಂದು ತಿಂಗಳಲ್ಲಿ ನೂರಕ್ಕಿಂತ ಹೆಚ್ಚು ಪತ್ರಕರ್ತರನ್ನು ತೆಗೆದುಹಾಕಿ ವೆಚ್ಚ ಕಡಿಮೆಮಾಡುವ ಹಂತದಲ್ಲಿದೆ. ಈ ಪತ್ರಿಕೆಯ ಭವಿಷ್ಯವೂ ಡೋಲಾಯಮಾನವಾಗಿದೆ. ಹಾಗಾದರೆ, ಇಂಥ ಪತ್ರಿಕೆಗಳು ಸತ್ತರೆ ಮುಂದೆ ತನಿಖಾ ಪತ್ರಿಕೋದ್ಯಮದ ಗತಿ ಏನಾಗುತ್ತದೆ?
ಜನರ ಉದಾರ ದೇಣಿಗೆಯಿಂದ ನಡೆಯುವ ಪತ್ರಿಕೆಗಳು ಹಾಗೂ ಬ್ಲಾಗುಗಳು ತನಿಖಾ ಪತ್ರಿಕೋದ್ಯಮವನ್ನು ಮುಂದುವರಿಸಬಹುದು. ನ್ಯಾಶನಲ್ ಪಬ್ಲಿಕ್ ರೇಡಿಯೋ ರೀತಿಯಲ್ಲಿ ಅಮೆರಿಕದಲ್ಲಿ, ಜನರ ದೇಣಿಗೆಯಿಂದಲೇ ನಡೆಯುವ ಅನೇಕ ಮಾಧ್ಯಮಗಳಿವೆ. ಮುಂದೊಂದು ದಿನ ಇಂಥ ಮಾಧ್ಯಮಗಳ ಸಾಲಿಗೆ ತನಿಖಾ ಪತ್ರಿಕೆಗಳೂ ಸೇರಬಹುದು ಎನ್ನುತ್ತಾರೆ ಅಮೆರಿಕದ ‘ಪ್ರಾಜೆಕ್ಟ್ ಫಾರ್ ಎಕ್ಸ್ಲೆನ್ಸ್ ಇನ್ ಜರ್ನಲಿಸಂ’ ಸಂಸ್ಥೆಯ ನಿರ್ದೇಶಕರಾದ ಟಾಮ್ ರೊಸೆಂಥಲ್.
ಯೂರೋಪ್ನ ಪತ್ರಿಕೆಗಳು ಸಾವಿನಿಂದ ಬಚಾವಾಗಲು ತಮ್ಮ ಸ್ವರೂಪದ ಜೊತೆ ಸುದ್ದಿಯ ವ್ಯಾಖ್ಯಾನವನ್ನು ಬದಲಿಸಿಕೊಂಡಿವೆ. ಅದರಲ್ಲೂ ಜರ್ಮನಿಯ ‘ಬಿಲ್ಡ್’ ಪತ್ರಿಕೆಯಂತೂ (ಸದ್ಯ ಜಗತ್ತಿನ ೭ನೇ ಅತಿ ಹೆಚ್ಚು ಪ್ರಸಾರ ಹೊಂದಿರುವ ಪತ್ರಿಕೆ) ಮುಖಪುಟದಲ್ಲೂ ಸಂಪೂರ್ಣ ನಗ್ನ ರೂಪದರ್ಶಿಯ ಚಿತ್ರ ಪ್ರಕಟಿಸಿ ಯುವಕರನ್ನು ಆಕರ್ಷಿಸಲು ಆರಂಭಿಸಿದೆ!
ಇದನ್ನೆಲ್ಲಾ ಗಮನಿಸಿದ ಮೇಲೆ, ‘ಸ್ಯಾಕ್ರಮೆಂಟೋ ಬೀ’ ಪತ್ರಿಕೆಯ ಡೆಪ್ಯೂಟಿ ಮ್ಯಾನೆಜಿಂಗ್ ಎಡಿಟರ್ ಮಾರ್ಟ್ರ್ ಸಾಲ್ಟ್ಸ್ಮನ್ ಅವರಿಗೆ ಹೇಳಿದೆ: ‘ಬಿಲ್ಡ್ ಪತ್ರಿಕೆಯಂಥ ಗಿಮಿಕ್ಗಳು ತೀರಾ ಅಸಹ್ಯಕರ, ನಿಜ. ಆದರೆ, ನಿಮ್ಮಂಥ ಮುಖ್ಯವಾಹಿನಿ ಪತ್ರಿಕೆಗಳು ಈಗ ಸಾವಿನಿಂದ ಪಾರಾಗಲು ಏನಾದರೂ ಮಾಡಲೇ ಬೇಕಲ್ಲ. ಅದಕ್ಕೆ ನಿಮಗಿರುವುದು ಒಂದೇ ದಾರಿ... ‘ಒಬಾಮಾ ಮಂತ್ರ’. ಬದಲಾವಣೆ!
Change that we need!
Change that we believe in.
Change that we can!
ಸಾಲ್ಟ್ಸ್ಮನ್ ನಕ್ಕರು. ಅವರ ನಗು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟದಷ್ಟೇ ಪೇಲವವಾಗಿತ್ತು!
9 comments:
Lekhana tumba chennagide sir...
ಸಾಲ್ಟ್ಸ್ಮನ್ ನಕ್ಕರು. ಅವರ ನಗು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟದಷ್ಟೇ ಪೇಲವವಾಗಿತ್ತು!....... Very funny lines sir
'ವೇಸ್ಟ್ ಪೇಪರ್' ಓದುತ್ತಿದ್ದಂತೆ ಇನ್ನು ಹತ್ತು ಹದಿನೈದು ವಷಗಳ ನಂತರ ಭಾರತೀಯ ಪತ್ರಿಕೆಗಳು ಪತನದ ಹಾದಿ ಹಿಡಿಯಬಹುದು ಎನ್ನಿಸಿತು.
ಇಂದು ಇಂಗ್ಲೀಷ್್ ಪತ್ರಿಕೆಗಳು, ಭಾಷಾ ಪತ್ರಿಕೆಗಳ ಮೇಲೆ, ರಾಜ್ಯ ಮಟ್ಟದ ಪತ್ರಿಕೆಗಳು ಸ್ಥಳೀಯ ಪತ್ರಿಕೆಗಳ ಮೇಲೆ ಆಕ್ರಮಣ ನಡೆಸಿವೆ. (ಬೆಲೆ ಇಳಿಕೆ, 1.50 ರೂ.ಗಳಿಗೆ ಶಾಲಾ ಮಕ್ಕಳಿಗೆ ವರ್ಷವಿಡೀ ಪೇಪರ್ ನೀಡುವ ಮೂಲಕ ಭಾಷಾ ಪತ್ರಿಕಾ ಓದುಗರನ್ನು ಇಂಗ್ಲೀಷ್ ಪತ್ರಿಕೆಗಳು, 3-4 ಪುಟಗಳನ್ನು ಸ್ಥಳೀಯ ಸುದ್ದಿಗಳಿಗೆ ಮೀಸಲಿಡುವ ಮೂಲಕ ರಾಜ್ಯ ಮಟ್ಟದ ಪತ್ರಿಕೆಗಳು ಜಿಲ್ಲಾ ಪತ್ರಿಕೆಗಳ ಓದುಗರನ್ನು ಸೆಳೆಯುತ್ತಿವೆ.) ಎಲ್ಲಾ ರೀತಿಯ ಪತ್ರಿಕೆಗಳ ಮೇಲೆ ನ್ಯೂಸ್ ಛಾನಲ್ ಗಳು ಲಗ್ಗೆ ಇಟ್ಟಿವೆ. ಬಹುತೇಕ ಸ್ಥಳೀಯ ಪತ್ರಿಕೆಗಳಂತೂ ತಮ್ಮ ಉಳಿವಿಗಾಗಿ ಸರ್ಕಾರಿ ಜಾಹೀರಾತನ್ನು ಅವಲಂಬಿಸಿವೆ. ಮುಂದಿನ ದಿನಗಳಲ್ಲಿ ಪರಸ್ಪರರನ್ನು ಹೇಗೆ ಎದುರಿಸುತತ್ತವೆ ಎಂಬುದು ಕುತೂಹಲಕಾರಿ ವಿಷಯ.
ಈ ನಿಟ್ಟಿನಲ್ಲಿ ಭಾಷಾ ಪತ್ರಿಕೆಗಳು, ಭಾಷಾ ಹೋರಾಟಗಾರರಿಂದ, ಕವಿ ಲೇಖಕರಿಂದ ಆಯಾ ಭಾಷೆಯನ್ನು ಉಳಿಸಲು ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ. ಭಾಷೆಯ ಉಳಿಯುವಿಕೆಯ ಮೇಲೆ ಭಾಷಾ ಪತ್ರಿಕೆಗಳ ಅಸ್ತಿತ್ವ ನಿಂತಿದೆ.
ಏನೇ ಇರಲಿ, ಬೆಳಗಿನ ಕಾಫಿಯೊಂದಿಗೆ ಪತ್ರಿಕೆ ಇಲ್ಲದಿರುವುದನ್ನು ನೆನಸಿಕೊಂಡರೆ ಮೈ ಜುಮ್ಮೆನ್ನುತ್ತದೆ.
- ಗೊರುರು ಶಿವೇಶ್,
ಮಂಜುನಾಥ ನಿಲಯ, ಆದರ್ಶ ನಗರ, ಹಾಸನ
ಈ ಲೇಖನ, ಭಾರತದಲ್ಲೂ ಪತ್ರಿಕೆಗಳಿಗೆ ಒದಗಬಹುದಾದ ದುಸ್ಥಿತಿಗೆ ಮುನ್ನುಡಿಯಂತಿದೆ.
ಪತ್ರಿಕಾ ಉದ್ಯಮ ಪ್ರಗತಿಯ ಪಥದಲ್ಲಿ ಅಥವಾ ಲಾಭದಾಯಕವಾಗಿ ಸಾಗಬೇಕಾದರೆ ಪತ್ರಿಕೆಗಳ ವಾಚಕರ ಸಂಖ್ಯೆ ವಿಪುಲ ಪ್ರಮಾಣದಲ್ಲಿರಬೇಕು. ಜಾಹೀರಾತುಗಳೂ ಸಾಕಷ್ಟು ಸಿಗಬೇಕು. ಆದರೆ, ಇವೆರಡೂ ಇಲ್ಲವಾದರೆ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಸಿಬ್ಬಂದಿಗಳ ಸಂಖ್ಯೆಯನ್ನು ಕನಿಷ್ಠ ಪ್ರಮಾಣಕ್ಕೆ ಸೀಮಿತಗೊಳಿಸಬೇಕು ಹಾಗೂ ಇತರ ಬಗೆಯ ದುಂದು ವೆಚ್ಚಗಳನ್ನು ತಡೆಗಟ್ಟಬೇಕು. ಈ ಮೇಲಿನ ಪೂರಕ ಸ್ಥಿತಿಗೆ, ವಾತಾವರಣಕ್ಕೆ ತದ್ವಿರುದ್ಧವಾಗಿ ಅಂತರ್ಜಾಲದ ಮೂಲಕ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವವರು ಅಧಿಕವಾದರೆ ಅಂಥ ಕಡೆ ಪತ್ರಿಕೆಗಳ ಪ್ರಸರಣ ಸಂಖ್ಯೆ ಕುಗ್ಗುವುದು, ಕ್ರಮೇಣ ವೃದ್ಧಿಕೊಳ್ಳುವ ಹಾನಿಯಿಂದ ಪಾರಾಗಲು ಆ ಉದ್ಯಮವನ್ನು ಸ್ಥಗಿತಗೊಳಿಸಬೇಕಾದದ್ದು ಅನಿವಾರ್ಯ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಪ್ರಸಾರವಾಗುವ ಪತ್ರಿಕೆಗಳ ಸಂಖ್ಯೆ ವೃದ್ಧಿಗೊಂಡಿದೆಯಾದರೂ, ಅಂತರ್ಜಾಲದ ಹಾಗೂ ದೃಶ್ಯ ಮಾಧ್ಯಮಗಳ ದುಷ್ಪ್ರಭಾವಕ್ಕೆ ಒಳಗಾದವರು ಕ್ರಮೇಣ ಹೆಚ್ಚುತ್ತಿರುವುದರಿಂದ, ಜಾಹೀರಾತುಗಳ ಆಧಾರದಿಂದ ಹಾಗೂ ಹೀಗೂ ಜೀವವುಳಿಸಿಕೊಂಡಿರುವ ಕೆಲವು ಪತ್ರಿಕೆಗಳು ಮುಂದೆ ಅವಸಾನಗೊಳ್ಳಬಹುದಾದ ಸಂಭವನೀಯತೆ ವಿಚಾರಾರ್ಹ ಹಾಗೂ ಆತಂಕದಾಯಕ.
-ನಾ. ಕು. ಗಣೇಶ್,
ಸಾಹಿತ್ಯಪ್ರಿಯ ನಿಲಯ, ಮಾರುತಿಬೀದಿ,
ರಾಮಮೂರ್ತಿನಗರ, ಬೆಂಗಳೂರು
ಅಮೆರಿಕಾದಲ್ಲಿ ಪತ್ರಿಕೆಗಳ ಅವಸಾನ - ಲೇಖನ ಓದಿ ತುಂಬಾ ದುಃಖವಾಯಿತು. ಪತ್ರಿಕೆಗಳಿಗೆ ಬೆಲೆ ಇಲ್ಲದಂತೆ ಅಮೆರಿಕಾದ ಜನರ ವರ್ತನೆಗೆ ಧಿಕ್ಕಾರ ಇರಲಿ. ಪತ್ರಿಕೆಯನ್ನು ಮುದ್ರಣ ಮಾಡಲು ಅವರು ಪಡುವ ಪರಿಶ್ರಮ ತುಂಬಾ ಇದೆ. ಒಂದು ದೇಶದ ಪ್ರಗತಿಗೆ ಅಲ್ಲಿನ ಪತ್ರಿಕೆಗಳು ತುಂಬಾ ಪ್ರಭಾವ ಬೀರುತ್ತವೆ. ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಇರಬೇಕು. ಪತ್ರಿಕೆಗಳನ್ನು ಗೌರವಿಸಿ, ಓದುವ ಜೊತೆ, ಇರುವ ಪತ್ರಿಕೆಗಳನ್ನು ಉಳಿಸಿ ಬೆಳೆಸಬೇಕು. ಯಾವುದೇ ಕಾಲ ಇದ್ದರೂ ಪತ್ರಿಕೆಗಳು ಆಯಾ ದೇಶದ 'ಶಾಂತಿಧೂತ'ರಂತೆ ಇರುತ್ತವೆ.
- ಪಿ. ಗೋವಿಂದರಾಜ್, ಶಿವಮೊಗ್ಗ
ಪತ್ರಿಕಾ ಉದ್ಯಮ ಹಾಗೂ ಇಂಟರ್ ನೆಟ್ ಮಾಧ್ಯಮ ಇವುಗಳ ಕುರಿತಾಗಿ ಪ್ರತ್ಯಕ್ಷ ನಿರೀಕ್ಷಣೆಗೌದು ಪರಸ್ಪರ ಆವಕ-ಜಾವಕಗಳ ಮಂಥನಿದಂದ ಅವಲೋಕನಾ ಲೇಖನವಾಗಿ ದಾಖಲಾದ ಈ ಲೇಖನ ಸೂಪರ್ ಬೆಸ್ಟ್ ಎಂದೆನಿಸಿತು. ಅಮೆರಿಕದಲ್ಲಿನ ಪರಿಸ್ಥಿತಿ ಭಾರತವೂ ಸೇರಿ ಇತರ ದೇಶೀಯರಿಗೆ ಎಚ್ಚರಿಕೆಯ ಗಂಟೆಯೂ ಹೌದೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
- ಕೀರಿಕ್ಕಾಡು ವನಮಾಲ ಕೇಶವ ಭಟ್ಟ,
ಪಂಜಿ ಕಲ್ಲು, ಕಾಸರಗೋಡು
ರವಿ ಹೆಗಡೆಯವರ 'ವೇಸ್ಟ್ ಪೇಪರ್' ಲೇಖನ ಓದಿದೆ. ಜಿಜ್ಞಾಸೆ ಮೂಡಿತು. ಅಮೆರಿಕಾದಲ್ಲಿ ಪತ್ರಿಕೆಗಳ ಅವಸಾನ ನಡೆಯುತ್ತಿದೆ ಎಂಬ ವಿಚಾರ ತಿಳಿದು ಆಶ್ಚರ್ಯವಾಯಿತು. ಭಾರತ ದೇಶದ ಕನಾಟಕ ರಾಜ್ಯದಲ್ಲಿ ದಿನ ಮತ್ತು ವಾರ ಪತ್ರಿಕೆಗಳನ್ನು ಕೊಂಡು ಓದದೆ, ಉಚಿತವಾಗಿ ಓದುವ ಅಭ್ಯಾಸ ಇದೆ.ಇದು ಪತ್ರಿಕಾ ಸಮೂಹಗಳನ್ನು ರಕ್ಷಿಸುತ್ತದೋ ಇಲ್ಲವೋ ಗೊತ್ತಿಲ್ಲ. ಒಟ್ಟಾರೆ ದಿನ ಪತ್ರಿಕೆಗಳ ಮೇಲೆ ಅಭಿಮಾನ ಇರಬೇಕು. 'ವೇಸ್ಟ್ ಪೇಪರ್' ಯೂವತ್ತೂ ಜೀವಂತ!
- ಹ. ಚ. ಸತ್ಯನಾರಾಯಣ ಉರಾಳ,
ಯಶವಂತಪುರ, ಬೆಂಗಳೂರು.
ಸಾಪ್ತಾಹಿಕದ ಮುಖಪುಟ ಲೇಖನ, 'ವೇಸ್ಟ್ ಪೇಪರ್'ಲೇಖನ ಓದುತ್ತಾಹೊದಂತೆಲ್ಲಾ ದಿಗ್ಬ್ರಮೆ ಮೂಡಿಸಿತು. ಅಂತರ್ ಜಾಲ ಬಂದ ನಂತರ, ಟಿ.ವಿ. ಮಾಧ್ಯಮ ಬಂದ ಮೇಲೆ ಪೇಪರ್ ಮೂಲೆಗುಂಪಾಗುತ್ತಿರುವುದು ದಃಖದ ಸಂಗತಿಯಾದರೆ, ಪ್ರಪಂಚದ ಹಿರಿಯಣ್ಣ, ಅತಿ ಬುದ್ಧಿವಂತ ರಾಷ್ಟ್ರ ಅಮೆರಿಕಾದಲ್ಲೂ ಪೇಪರ್ ಓದುಗರಿಲ್ಲದಿರುವುದು ಖೇದದ ಸಂಗತಿ. ನಿಜಕ್ಕೂ ಅದಮ್ಯ ಲೇಖನ ಬಿಚ್ಚಿಟ್ಟ ರವಿ ಹೆಗಡೆಯವರಿಗೆ ವಂದನೆಗಳು.
- ನಾಗರಾಜ ಬಣಕಾರ್
ಕೊಟ್ಟೂರು
ಈ ಲೇಖನ ಅತ್ಯುತ್ತಮವಾಗಿತ್ತು. ಪತ್ರಿಕಾ ಮಾಧ್ಯಮದಲ್ಲಿ ತಂತ್ರಜ್ಞಾನ ನುಸುಳಿ ಉಪಯುಕ್ತತೆಯೊಂದಿಗೆ ನಡೆಸುತ್ತಿರುವ ಗಧಾ ಪ್ರಹಾರವನ್ನು ಅಮೆರಿಕಾದಲ್ಲಿನ ವಾಸ್ತವತೆಯೊಂದಿಗೆ ಬೆರೆಸಿ ಲೇಖಕರು ತಿಳಿಸಿಕೊಟ್ಟಿದ್ದಾರೆ. ಒಂದು ದೃಷ್ಟಿಕೋನದಲ್ಲಿ ಇದು ಪತ್ರಿಕಾ ಮಾಧ್ಯಮಕ್ಕೆ ಮಾರಕವೆಂದೆನಿಸಿದರೂ ಗಡಿಬಿಡಿಯ ಈ ಲೈಪಿಗೆ ಸಹ್ಯವೆನಿಸುತ್ತದೆ.
ಲೇಖನ ಸಾಕಷ್ಟು ಮಾಹಿತಿಯನ್ನೊಳಗೊಂಡಿದ್ದು ಸಂಗ್ರಹ ಯೋಗ್ಯವಾಗಿದೆ.
- ಸಚಿನ್ ಕುಮಾರ್ ಬಿ. ಹಿರೇಮಠ
ಜೇವರ್ಗಿ, ಗುಲಬರ್ಗಾ
ಪೋಸ್ಟ್ ಕಾರ್ಡೂ ಲೆಕ್ಕಕ್ಕಿಲ್ಲ !
ಈ ಲೇಖನ ವಿಶ್ವದ ಅಗ್ರಮಾನ್ಯ ದೇಶದ ಆರ್ಥಿಕ ಸ್ಥಿತಿ-ಗತಿ ವಿವರಿಸಿತು. ಎಲ್ಲಾ ವಿಷಯದಲ್ಲೂ ಒಂದು ಹೆಜ್ಜೆ ಮುಂದಿರುವ ಅಮೇರಿಕಾ ದೇಶ, ಪತ್ರಿಕೆಗಳಲ್ಲಿ ಯಾಕೆ ಹಿಂದುಳಿಯುತ್ತಿದೆ ಎಂದು ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ಕಾರಣ ಇಂಟರ್ ನೆಟ್, ಇ-ಮೇಲ್ ಎಂಬ ತತ್ ಕ್ಷಣ ಸುದ್ದಿ ರವಾನಿಸುವ ತಂತ್ರಜ್ಞಾನ. ಇವೆಲ್ಲವುಗಳ ಮುಂದೆ ಪೋಸ್ಟ್ ಕಾರ್ಡ್, ಪೇಪರ್ ಲೆಕ್ಕಕ್ಕಿಲ್ಲವಾಗಿದೆ.
- ಚಂದ್ರಕಾಂತ, ಹೊಸಪೇಟೆ
Post a Comment